ಬೆಂಗಳೂರು: ಕೊರೊನಾ ವೈರಸ್‍ಗೆ ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕಲಬುರಗಿಗೆ ತೆರಳಲು ಭಯವೇ ಅನ್ನೋ ಪ್ರಶ್ನೆಯೊಂದು ಕಾಡುತ್ತಿದೆ.
ಹೌದು. ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಕುರಿತು ಕಾರಜೋಳ ಅವರು ಇಂದು ಜಿಲ್ಲಾಧಿಕಾರಿ ಜೊತೆ ವಿಡಿಯೋ ಕಾನ್ಪರೆನ್ಸ್‍ನಲ್ಲಿ ಮಾತನಾಡಿದ್ದಾರೆ. ವಿಧಾನಸೌಧ ಕಮಿಟಿ ರೂಂ ನಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದಾಗ, ಕಲಬುರಗಿ ಜಿಲ್ಲೆಗೆ ಭೇಟಿ ನೀಡುತ್ತೀರಾ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದರು. ಆದರೆ ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಡಿಸಿಎಂ, ಈ ಹಿಂದೆ ಮಹಾರಾಷ್ಟ್ರಕ್ಕೆ ಹೋದಾಗ ನಾನು ಹೆಚ್ 1 ಎನ್ 1 ಆಗಿ ಬಹಳ ಅನುಭವಿಸಿದ್ದೇನೆ. ಕಿವಿ ನೋವು ಈವರೆಗೂ ಹೋಗ್ತಿಲ್ಲ. ಭಯ ನನಗೂ ಇದೆ ನಿಮಗೂ ಇದೆ. ಇದು ಅತೀ ಸೂಕ್ಷ್ಮ ವಿಚಾರ. ಹೀಗಾಗಿ ಇದನ್ನು ಬಹಳ ಎಳೆದಾಡೋದು ಸರಿಯಲ್ಲ ಎಂದರು.
ಕೊರೊನಾ ವೈರಸ್ ಪ್ರಪಂಚವನ್ನೇ ಕಾಡ್ತಿರೋ ಮಹಾ ರೋಗ. ಹೀಗಾಗಿ ಯಾರು ಕೂಡ ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಬೇಸಿಗೆ ಆರಂಭ ಆಗೋವರೆಗೂ ರಾಜ್ಯದ ಜನರು ಜಾಗೃತರಾಗಿರಬೇಕು. ಸರ್ಕಾರ ಈಗಾಗಲೇ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಸಲಹೆ ನೀಡಿದರು.
ಚಿಕಿತ್ಸೆ ನೀಡಿದ ವೈದ್ಯರಿಗೆ ಕೊರೊನಾ ಬಂದಿರೋದು ಬಹಳ ನೋವಿನ ಸಂಗತಿ. ಯಾರು ಕೂಡ ಹೆಚ್ಚು ಪ್ರಯಾಣ ಮಾಡಬೇಡಿ. ಸೋಂಕಿತ ಪ್ರದೇಶದಲ್ಲಿ ಪ್ರಯಾಣ ಮಾಡಬೇಡಿ. ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರು ನಾವು ಎಚ್ಚರಿಕೆಯಿಂದ ಇರಬೇಕು. ಸಿಎಂ ಕೂಡ ಈ ಬಗ್ಗೆ ಪ್ರತಿನಿತ್ಯ ವರದಿ ತೆಗೆದುಕೊಳ್ತಿದ್ದಾರೆ ಎಂದರು.