ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಶಾಸಕರು ಹಾಗೂ ಕೆಲವು ನಾಯಕರಿಗೆ ಗೂಟದ ಕಾರಿನ ಕನವರಿಕೆಯಾಗಿದೆ. ಆದ್ರೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಗೆ ಬಂಡಾಯ ಬಾವುಟದ ಚಿಂತೆಯಾಗಿದೆ.
ನಿಗಮ ಮಂಡಳಿ ಮೂಲಕ ಪಕ್ಷದ ನಾಯಕರುಗಳು ಗೂಟದ ಕಾರು ಏರುವ ಕನವರಿಕೆಯಲ್ಲಿದ್ದಾರೆ. ಜಂಟಿ ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ಮಾಡಿ ಜಿಲ್ಲಾ ಉಸ್ತುವಾರಿ ನೇಮಕ ಮಾಡಲು ಎರಡು ಪಕ್ಷಗಳ ನಾಯಕರು ಮುಂದಾಗಿದ್ದಾರೆ. ಕಾಂಗ್ರೆಸ್ ನ 6 ಸ್ಥಾನಗಳ ಪೈಕಿ 4 ಸ್ಥಾನ ತುಂಬಲು ಕಾಂಗ್ರೆಸ್ ಮುಂದಾಗಿದ್ದು, ಮೊದಲ ಹಂತದ ತಮ್ಮ ಪಾಲಿನ 20 ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆಗೂ ಕಾಂಗ್ರೆಸ್ ನಿರ್ಧಾರ ಮಾಡಿದೆ.
Advertisement
ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿರುವ ಡಿಸಿಎಂ ಪರಮೇಶ್ವರ್, ಈ ಕುರಿತು ಸಿದ್ದರಾಮಯ್ಯ ಜೊತೆ ಚರ್ಚಿಸಿ ನೇಮಕಾತಿಗೆ ವೇದಿಕೆ ಸಿದ್ಧಪಡಿಸಿದ್ದಾರೆ. ಆದ್ರೆ ಈ ಇಬ್ಬರಿಗೂ 20 ನಿಗಮ ಮಂಡಳಿಗಳಲ್ಲಿ ಶಾಸಕರುಗಳನ್ನ ಸಮಾಧಾನಪಡಿಸೋದು ಹೇಗೆ ಎಂಬುದು ತಲೆಬಿಸಿಯಾಗಿದೆ.
Advertisement
Advertisement
40 ಕ್ಕೂ ಹೆಚ್ಚು ಜನ ಸಚಿವ ಸ್ಥಾನ ಆಕಾಂಕ್ಷಿಗಳಿದ್ದರು. ಅದರಲ್ಲಿ 20 ಸಚಿವ ಸ್ಥಾನ ಕಳೆದರೆ ಉಳಿದ 20 ಜನರನ್ನ ನಿಗಮ ಮಂಡಳಿಯಲ್ಲಿ ಸಮಾಧಾನ ಮಾಡೋದು ಕಷ್ಟ. ಎಲ್ಲಾ ನಿಗಮ ಮಂಡಳಿಯನ್ನು ಶಾಸಕರಿಗೆ ಕೊಟ್ಟರೆ ನಿಗಮ ಮಂಡಳಿಯ ನಿರೀಕ್ಷೆಯಲ್ಲಿರುವ ನಾಯಕರುಗಳ ಅಸಮಾಧಾನ ಎದುರಿಸಬೇಕಾಗುತ್ತದೆ.
Advertisement
ಇದೂವರೆಗೆ ಸಂಪುಟ ವಿಸ್ತರಣೆ ಆಗಿಲ್ಲ. ನಿಗಮ ಮಂಡಳಿ ನೇಮಕ ಆಗಿಲ್ಲ ಎಂಬ ಚಿಂತೆಯಷ್ಟೇ ಕಾಂಗ್ರೆಸ್ ಪಾಳಯದಲ್ಲಿತ್ತು. ಆದರೆ ಈಗ ಯಾರಿಗೆ ಲಕ್ ಯಾರಿಗೆ ಕೋಕ್ ಅನ್ನೋ ಟೆನ್ಶನ್ ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ. ಆದರೆ ಚಿಂತೆಗೆ ಬಿದ್ದಿರುವ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಸಂಪುಟ ಹಾಗೂ ನಿಗಮ ಮಂಡಳಿಗೆ ಕೈ ಹಾಕಿದ್ರೆ, ಇನ್ನೆಲ್ಲಿ ಬಂಡಾಯದ ಬಾವುಟ ಹಾರುತ್ತೋ ಅನ್ನೋ ಟೆನ್ಷನ್ ನಲ್ಲಿದ್ದಾರೆ. ಒಟ್ಟಾರೆ ಕಾಂಗ್ರೆಸ್ ನಲ್ಲಿ ಸ್ಥಾನಮಾನ ಕೊಟ್ರು ಸಮಸ್ಯೆ, ಕೊಡದಿದ್ರು ಸಮಸ್ಯೆ ಅನ್ನೋವಂತಾಗಿದೆ.