ಬೆಂಗಳೂರು: ವೇದಿಕೆಯಲ್ಲೇ ಸಚಿವ ಎಂ.ಬಿ ಪಾಟೀಲ್‌ಗೆ (MB Patil) ಡಿಸಿಎಂ ಡಿಕೆ ಶಿವಕುಮಾರ್ (DK Sivakumar) ಗದರಿದ ಪ್ರಸಂಗ ಇಂದು ನಡೆದಿದೆ.
ನೂತನ ಕಟ್ಟಡ ಇಂದಿರಾ ಭವನದಲ್ಲಿ ಭಾನುವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಡಿಕೆಶಿ ಭಾಷಣ ಮಾಡುವಾಗ ವೇದಿಕೆ ಮೇಲೆ ಕುಳಿತಿದ್ದ ಎಂ.ಬಿ ಪಾಟೀಲ್ ಅವರು ಸಿದ್ದರಾಮಯ್ಯ (Siddaramaiah) ಜೊತೆ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಡಿಕೆಶಿ `ಡೋಂಟ್ ಡಿಸ್ಟರ್ಬ್, ಡೋಂಟ್ ಡಿಸ್ಟರ್ಬ್’ ಎಂದು ಎಂ.ಬಿ ಪಾಟೀಲ್‌ಗೆ ಗದರಿದ್ದಾರೆ. ಅದಕ್ಕೆ ಎಂಬಿಪಿ ಸಮಜಾಯಿಷಿ ನೀಡಲು ಮುಂದಾದಾಗ ಇರಲಿ ಡೋಂಟ್ ಡಿಸ್ಟರ್ಬ್, ಇಲ್ಲಿ ಕೆಲವು ಹೊಸ ವಿಚಾರ ಹೇಳ್ತಿದ್ದೀನಿ ಎಂದು ಡಿಕೆಶಿ ಹೇಳಿದರು. ಇದರಿಂದ ಎಂಬಿಪಿ ಮುಜುಗರಕ್ಕೆ ಒಳಗಾಗಿ ಸುಮ್ಮನೆ ಕುಳಿತರು.
Advertisement
Advertisement
ಬಳಿಕ ಮಾತು ಮುಂದುವರಿಸಿದ ಡಿಕೆಶಿ, ನನ್ನ ಬಳಿ ಬಂದು ಸಿದ್ದರಾಮಯ್ಯ ಹಾಗಂದ್ರು, ಎಂಬಿಪಿ ಹೀಗಂದ್ರು ಅಂತಾ ಚಾಡಿ ಹೇಳಿ ತಂದು ಹಾಕಬೇಡಿ. ಮೊದಲು ಬೂತ್ ಮಟ್ಟದಲ್ಲಿ ಬಲಿಷ್ಠರಾಗಿ ಸಿದ್ದರಾಮಯ್ಯ ಮನೆ ನನ್ನ ಮನೆ ಸುತ್ತುತ್ತಾ ಇರಬೇಡಿ. ನಿಮ್ಮ ಗುರಿ ಮುಂದಿನ ಚುನಾವಣೆಗೆ ನಿಮ್ಮ ಬೂತ್ ಸಿದ್ದಪಡಿಸಿ. ಸಂಸತ್‌ಗೂ ವಿಧಾನಸಭೆಗೂ ವ್ಯತ್ಯಾಸ ಇರುತ್ತೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
Advertisement
ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದ ಬಗ್ಗೆ ನಾವು ಮಾತನಾಡೋಕ್ಕಾಗಲ್ಲ. ನಮ್ಮ ಇಬ್ಬರಿಗೂ ಏನು ಹೇಳಬೇಕೋ ಅದನ್ನ ಹೈಕಮಾಂಡ್ ನಾಯಕರು ಹೇಳಿದ್ದಾರೆ ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ತಿಳಿಸಿದರು.
Advertisement
ನಾನು ಬಂಗಾರಪ್ಪನ ಶಿಷ್ಯ, ಎಸ್.ಎಂ ಕೃಷ್ಣರ ಶಿಷ್ಯ ಅಲ್ಲ. ನಾನು ಬಂಗಾರಪ್ಪನವರ ಜೊತೆ ರಾಜಕಾರಣ ಶುರು ಮಾಡಿದವನು ಎಂದ ಡಿಕೆಶಿ ವೀರೇಂದ್ರ ಪಾಟೀಲ್‌ರನ್ನ ಸಿಎಂ ಸ್ಥಾನದಿಂದ ಏಕೆ ಕೆಳಗಿಳಿಸಲಾಯಿತು ಅನ್ನೋದರ ಬಗ್ಗೆ ಸ್ಪಷ್ಟನೆ ನೀಡಿದರು. ಎಲ್ಲರೂ ವೀರೇಂದ್ರ ಪಾಟೀಲ್ ಅವರನ್ನ ಕೆಳಗಿಳಿಸಿದ್ರು ಅಂತಾರೆ. ಆದ್ರೆ ಆವತ್ತು ಅವರ ಆರೋಗ್ಯ ಸ್ಥಿತಿ ಹಾಗಿತ್ತು, ಆದ್ದರಿಂದ ತೀರ್ಮಾನ ಕೈಗೊಂಡರು. ಅಂದು ವಿರೇಂದ್ರ ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲೇ ಚುನಾವಣೆ ಗೆದ್ದಾಗ, ಅವರೇ ಸಿಎಂ ಆಗಿದ್ದರು ಎಂದು ಹೇಳಿದರು.