ಬೆಂಗಳೂರು: ಜಂಬೂ ಸವಾರಿಗೂ ಮುನ್ನ ವಿರೋಧಿಗಳಿಗೆ ಸಿಎಂ ಗುನ್ನಾ ಹೊಡೆದಿದ್ದಾರೆ. ಆಪ್ತ ವಲಯಕ್ಕೆ ಏನೂ ಆಗಲ್ಲ, ಸುಮ್ಮನಿರಿ ಎಂಬ ಸಂದೇಶ, ಕುರ್ಚಿ ಕೈ ಹಾಕಬಾರದು ಎಂದು ವಿರೋಧಿಗಳಿಗೆ ಟಕ್ಕರ್ ಕೊಡುವುದು ಸಿಎಂ ಗೇಮ್ ಪ್ಲ್ಯಾನ್. ಇನ್ನೊಂದು ಸೈಡ್‌ನಿಂದ ಡಿಕೆಶಿ (DK Shivakumar) ಸಂಘರ್ಷದ ರಾಜಕಾರಣ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದು, ಮೂರು ಜನಕ್ಕಷ್ಟೇ ಗೊತ್ತು, ಉಳಿದವರಿಗೆ ಏಕೆ ಬೇಕು ಎಂಬ ಆಟ ಶುರು ಮಾಡಿದ್ದಾರೆ.
ನೀವು ಮಾತಾಡಿದ್ರೆ, ನಾನು ಮಾತಾಡ್ತೀನಿ. ನೀವು ಸುಮ್ಮನಿದ್ರೆ, ನಾನು ಸುಮ್ಮನಿರುತ್ತೀನಿ. ಆದ್ರೆ ಕೆಣಕಿದ್ರೆ ಹುಷಾರ್.. ಇದು ಸಿಎಂ ಸಿದ್ದರಾಮಯ್ಯ (Siddaramaiah) ಅಸಲಿ ಆಟ. ಹೌದು, ಜಂಬೂ ಸವಾರಿ ಮುನ್ನ ದಿನ ಅಂದ್ರೆ ಬುಧವಾರ ಸಿಎಂ ಸಿದ್ದರಾಮಯ್ಯ ನನ್ನ ಕುರ್ಚಿ ಗಟ್ಟಿ ಎಂಬ ಸಂದೇಶ ನಾನಾ ಲೆಕ್ಕಾಚಾರ ಹುಟ್ಟುಹಾಕಿದೆ. ತವರಿನಲ್ಲೇ ಪಕ್ಷದೊಳಗಿನ ವಿರೋಧಿಗಳಿಗೆ, ಹೊರಗಿನ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಪವರ್ ಶೇರಿಂಗ್ ವಿಚಾರ; ಸಿಎಂ ಏನು ಹೇಳಿದ್ದಾರೆ ಅಷ್ಟೇ: ಡಿಕೆಶಿ
ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ಇರುತ್ತೇನೆ. ಐ ಹೋಪ್ ಸೋ ಅಂತಾ ಸಿದ್ದರಾಮಯ್ಯ ಎಚ್ಚರಿಕೆಯ ಆಟಕ್ಕಿಳಿದಿದ್ದಾರೆ. ಹೈಕಮಾಂಡ್ ಹೇಳಿದಂತೆ ಕೇಳಬೇಕು ಅಂದಿದ್ದೇಕೆ? ಕೊಡುವ ಸಂದೇಶವನ್ನೆಲ್ಲ ಕೊಟ್ಟು ಜಾಣ ನಡೆ ಅನುಸರಿಸಿರುವ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನಿಷ್ಠೆ ಕಾರ್ಡ್ ಪ್ಲೇ ಮಾಡಿ ಚೆಕ್‌ಮೇಟ್ ಇಟ್ಟಿದ್ದಾರೆ.
ಈ ನಡುವೆ ಸಿಎಂ ಸಿದ್ದರಾಮಯ್ಯ ಮಾತಿಗೆ ಡಿಕೆಶಿ ಕೂಡ ಸಾಫ್ಟ್ ಲಾಂಚ್ ರಿಯಾಕ್ಷನ್ ಕೊಡುವ ಮೂಲಕ ಚದುರಂಗದಾಟಕ್ಕೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ. ಆದ್ರೆ ಹೈಕಮಾಂಡ್ ಅಂತಿಮ ಅಂತ ಅಷ್ಟೇ. ಅವರ ಪರವಾಗಿ ಮಾತನಾಡಿದರು ಡ್ಯಾಮೇಜ್. ನನ್ನ ಪರವಾಗಿ ಮಾತನಾಡಿದರು ಡ್ಯಾಮೇಜ್ ಅಂತಾ ಬೆಂಗಲಿಗರಿಗೂ ಎಚ್ಚರಿಸಿದ್ದಾರೆ. ಸರ್ಕಾರದಲ್ಲಿ ಪವರ್ ಶೇರಿಂಗ್ ಬರಲ್ಲ. ನಾನು ಮಾತಾಡಿದ್ದು ಬೋರ್ಡ್ ಡೈರೆಕ್ಟರ್ ಶೇರಿಂಗ್ ಬಗ್ಗೆ ಮಾತ್ರ. ಸರ್ಕಾರದ ಪವರ್ ಶೇರಿಂಗ್ ಬಗ್ಗೆ ಮಾತಾಡೋಕೆ ನಾನು, ಸಿದ್ದರಾಮಯ್ಯ, ಹೈಕಮಾಂಡ್ ಇದೆ ಎಂದು ಹೇಳಿದ್ದಾರೆ.
ಇನ್ನು ಡಿಕೆಶಿಗೆ ಆಪ್ತರೇ ದೊಡ್ಡ ತಲೆನೋವಾಗಿದ್ದಾರೆ. ಆಕ್ಷನ್, ರಿಯಾಕ್ಷನ್‌ನಿಂದ ಡ್ಯಾಮೇಜ್ ತಪ್ಪಿದ್ದಲ್ಲ ಅನ್ನೋದು ಚೆನ್ನಾಗಿ ಗೊತ್ತಿದೆ. ಹಾಗಾಗಿ ಆಪ್ತರಿಗೂ ಬಹಿರಂಗವಾಗಿಯೇ ಡಿಕೆಶಿ ವಾರ್ನ್ ಮಾಡಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡಗೂ ನೋಟಿಸ್ ಕೊಡಿ, ಶಾಸಕ ರಂಗನಾಥ್‌ಗೂ ನೋಟಿಸ್ ಕೊಡಿ ಅಂತ ಹೇಳಿದ್ದೇನೆ ಹೀಗಾಗಿ ಯಾರೇ ಮಾತಾಡಿದ್ರೂ ನೋಟಿಸ್ ಕೊಡಲು ಹೇಳಿದ್ದೇನೆ ಅಂತಾ ಡಿಕೆಶಿ ಕಾರ್ಡ್ ಪ್ಲೇ ಮಾಡಿದ್ದಾರೆ.
ಅತ್ತ ಬುಧವಾರ ಸಿಎಂ ಸಿದ್ದರಾಮಯ್ಯ ಬಳಿಕ ಆಪ್ತ ಹೆಚ್.ಸಿ.ಮಹದೇವಪ್ಪ ಕೂಡ ಅಲ್ಲೇ ರಿಯಾಕ್ಟ್ ಮಾಡಿ, ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಯರ‍್ಯಾರದ್ದೋ ಹೇಳಿಕೆಗಳಿಗೆ ಹೆಚ್ಚು ಮಹತ್ವ ಕೊಡಬೇಡಿ ಅಂತಾ ಟಕ್ಕರ್ ಕೊಟ್ಟಿದ್ರೆ, ಇಂದು ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ, ಡಿಕೆಶಿ ಹೇಳಿದ್ಮೇಲೆ ಮುಗೀತು ಅಂತ ಹೇಳಿದ್ದಾರೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನವೆಂಬರ್, ಡಿಸೆಂಬರ್‌ನಲ್ಲಿ ಆಟ ಇಲ್ಲ ಎಂಬ ಸಂದೇಶ ರವಾನಿಸಿದ್ರೆ, ಡಿಕೆಶಿ ಹೈಕಮಾಂಡ್ ಮುಂದೆ ಅಷ್ಟೇ ನಮ್ಮಿಬ್ಬರ ಆಟ ಅಂತಾ ಸೈಲೈಂಟ್ ಗೇಮ್ ಚಾಲೂ ಮಾಡಿದ್ದು, ಅಸಲಿ ಆಟ ಸಂಕ್ರಾಂತಿಗೋ? ಶಿವರಾತ್ರಿಗೋ ಕಾದುನೋಡಬೇಕಿದೆ.