ಬೆಂಗಳೂರು: ಕೇತಗಾನಹಳ್ಳಿ ಭೂಒತ್ತುವರಿ ಪ್ರಕರಣದಿಂದ ಕೆರಳಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ವಾರ್ ಡಿಕ್ಲೇರ್ ಮಾಡಿದ್ದಾರೆ. ಸಿಎಂ-ಡಿಸಿಎಂ ನನ್ನ ಮೇಲೆ ದ್ವೇಷ ಸಾಧಿಸ್ತಿದ್ದಾರೆ. ಆದ್ರೆ ನನ್ನತ್ರ ಟನ್‌ಗಟ್ಟಲೇ ದಾಖಲೆಗಳಿವೆ.. ಹುಷಾರ್, ನನ್ನನ್ನು ಕೆಣಕಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಮಾಜಿ ಪ್ರಧಾನಿ ಮಗ ನಾನು.. 4 ಎಕರೆ ಭೂಮಿ ಒತ್ತುವರಿ ಮಾಡಿಕೊಳ್ಬೇಕಾ? ಅಂತ ಪ್ರಶ್ನಿಸಿದ್ರು. ಅತಿಕ್ರಮಣದ ದಾಖಲೆ ಇದ್ರೆ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದ್ರು. ಮುಡಾ ಕೇಸಲ್ಲಿ ಲೋಕಾಯುಕ್ತ ತನಿಖೆಯ ಪಾರದರ್ಶಕತೆ ಬಗ್ಗೆ ಮತ್ತೆ ದನಿ ಎತ್ತಿದ್ರು. ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರ ಏಪ್ರಿಲ್ ಫೂಲ್ ಮಾಡ್ತಿದೆ ಎಂದು ಲೇವಡಿ ಮಾಡಿದ್ರು. ಕಸದ ಹೆಸ್ರಲ್ಲಿ ಲೂಟಿ ಎಂಬ ಆರೋಪಕ್ಕೂ ಕೌಂಟರ್ ನೀಡಿದ್ರು.
ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ. ಅದೆಷ್ಟು ದಾಖಲೆ ಇದೆಯೋ ರಿಲೀಸ್ ಮಾಡ್ಲಿ ಅಂತ ಕೌಂಟರ್ ಕೊಟ್ಟಿದ್ದಾರೆ.
ನಾನು ಕುಮಾರಸ್ವಾಮಿಗೆ ಹೆದರುವ ಮಗ ಅಲ್ಲ. ಟನ್ ಗಟ್ಟಲೇ ಅಲ್ಲ ಭೂಮಿಯನ್ನೇ ತರಲಿ, ನನ್ನ, ನನ್ನ ಹೆಂಡ್ತಿ ಮಕ್ಕಳ ಆಸ್ತಿ ಬಹಿರಂಗ ಮಾಡಲಿ. ನಾನು ಕುಮಾರಸ್ವಾಮಿಗೆ ಹೇಳುತ್ತೇನೆ, ನನ್ನದು ಎಷ್ಟು ವ್ಯವಹಾರ ಇದೆ ಅದರ ದಾಖಲೆ ಬಿಡುಗಡೆ ಮಾಡಲಿ, ನನಗೂ ಗೊತ್ತಿದೆ ನನ್ನ ಆಸ್ತಿ, ಮಕ್ಕಳ ಮತ್ತು ಕುಟುಂಬದ ಆಸ್ತಿ ಎಷ್ಟಿದೆ, ಅದನ್ನೆಲ್ಲಾ ತೆಗೆಸಿದ್ದಾರೆ. ಅದನ್ನು ಬಹಿರಂಗ ಮಾಡಲಿ, ಇವರಿಗೆಲ್ಲಾ ಹೆದರುವಂತಹ ಮಗ ಅಲ್ಲ ನಾನು ಅಂತ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ನೀರಾವರಿ ಯೋಜನೆಗಳ ಕುರಿತು ಮಾತನಾಡಿ, ಮೇಕೆದಾಟು, ಅಪ್ಪರ್ ಭದ್ರಾ, ಮಹದಾಯಿ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿದ್ದೇವೆ. ಅವರಿಗೆ ಎಲ್ಲವೂ ಅರ್ಥವಾಗಿದೆ. ಆದ್ಯತೆ ಇದೆ ಅನ್ನೋದು ಅವರಿಗೆ ಗೊತ್ತಾಗಿದೆ. ಎಲ್ಲರನ್ನ ಕರೆಸಿ ಮಾತನಾಡುತ್ತೇವೆ ಅಂದಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಯಾಬಿನೆಟ್ ಗೆ ಕಳಿಸಿದ್ದೇವೆ ಅಂದಿದ್ದಾರೆ. ನೋಡೋಣ ಏನು ಮಾಡ್ತಾರೆ. ಎತ್ತಿನಹೊಳೆ ಯೋಜನೆಗೆ ಅಪ್ಲೈ ಮಾಡಿದ್ದೇವೆ ಎಂದು ಹೇಳಿದರು.