– ರಾಮನಗರದಲ್ಲಿ ಒಂದು ಕ್ಷೇತ್ರ ಗೆಲ್ಲಲಾಗದ ಅಶ್ವಥ್ ನಾರಾಯಣ್, ಅಲ್ಪಸಂಖ್ಯಾತ ನಾಯಕನನ್ನು ಅಸಮರ್ಥ ಎನ್ನುತ್ತೀಯಾ?
– ಏಕವಚನದಲ್ಲೇ ಡಿಸಿಎಂ ಆಕ್ರೋಶ
ಬೆಂಗಳೂರು: ಅಶ್ವಥ್ ನಾರಾಯಣ್ (Ashwath Narayan) ನೀನು, ನಿನ್ನ ಪಕ್ಷ ಭ್ರಷ್ಟಾಚಾರದ ಪಿತಾಮಹರು. ರಾಮನಗರದಲ್ಲಿ ಒಂದೂ ಕ್ಷೇತ್ರ ಗೆಲ್ಲಲಾಗದವ, ಅಲ್ಪಸಂಖ್ಯಾತ ನಾಯಕನನ್ನು ಅಸಮರ್ಥ ಎನ್ನುತ್ತೀಯಾ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹರಿಹಾಯ್ದರು.
ವಿಧಾನಸಭೆ ಕಲಾಪದಲ್ಲಿ (Karnataka Legislative Assembly) ರಸಗೊಬ್ಬರ ಕೊರತೆ ವಿಚಾರವಾಗಿ ನಡೆದ ಚರ್ಚೆ ವೇಳೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಬುಧವಾರ ಬಿರುಸಿನ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಚರ್ಚೆ ವೇಳೆ ಮಾತನಾಡುವಾಗ ತಪ್ಪು ಅಂಕಿ ಅಂಶಗಳನ್ನು ನೀಡಿದ ಕಾರಣ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸರಿ ಅಂಕಿ-ಅಂಶಗಳ ಸ್ಪಷ್ಟನೆ ನೀಡಲು ಮುಂದಾದರು. ಇದನ್ನೂ ಓದಿ: ನಾನು ಕೇಂದ್ರಕ್ಕೆ ಹೋಗಲ್ಲ, ರಾಜ್ಯದಲ್ಲೇ ಇರ್ತೀನಿ: ಸಿದ್ದರಾಮಯ್ಯ
ಈ ವೇಳೆ ಅಶ್ವಥ್ ನಾರಾಯಣ್ ಮಧ್ಯಪ್ರವೇಶಿಸಿ ವಾಗ್ವಾದ ಆರಂಭಿಸಿದರು. ಆಗ ಸಚಿವ ಕೆ.ಜೆ ಜಾರ್ಜ್, ಸುಳ್ಳು ಹೇಳಬೇಡಿ ಎಂದು ಹೇಳಿದಾಗ, ಅಶ್ವಥ್ ನಾರಾಯಣ್, ಸ್ಮಾರ್ಟ್ ಮೀಟರ್ ವಿಚಾರವಾಗಿ ಮಾತನಾಡಲು ನಿಮಗೆ ಧಮ್, ಯೋಗ್ಯತೆ ಇಲ್ಲ. ನೀವು ಅಸಮರ್ಥ ಎಂದು ಟೀಕೆ ಮಾಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಅಸಮರ್ಥರು ಅವರಲ್ಲ. ನೀವು ಅಸಮರ್ಥರು. ರಾಜ್ಯದ ಜನ ಮತ ನೀಡಿ ಅಧಿಕಾರ ನಡೆಸಲು ಅವಕಾಶ ನೀಡಿರುವ ಜಾರ್ಜ್ ಅವರು ಅಸಮರ್ಥರಲ್ಲ. ನೀವು ಅಸಮರ್ಥರಾಗಿರುವ ಕಾರಣ ನಿಮ್ಮ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಾಳೆ ದರ್ಶನ್ ಪಾಲಿಗೆ ಬಿಗ್ ಡೇ – ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?
ಈ ಸಂದರ್ಭ ಅಶ್ವತ್ ನಾರಾಯಣ್, ಈ ಸರ್ಕಾರ ಅಸಮರ್ಥ, ಜನವಿರೋಧಿ, ಭ್ರಷ್ಟಾಚಾರ ಸರ್ಕಾರ ಎಂದರು. ಇದಕ್ಕೆ ಏಕವಚನದಲ್ಲೇ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್, ನೀನು, ನಿನ್ನ ಪಕ್ಷ ಭ್ರಷ್ಟಾಚಾರದ ಪಿತಾಮಹರು. ನಿಮ್ಮ ಭ್ರಷ್ಟಾಚಾರದಿಂದಲೇ ನಾವು 135 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ನೀನು ರಾಮನಗರಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಬಂದಿದ್ಯಲ್ಲ. ಆಗ ನಿನಗೆ ಡೆಪಾಸಿಟ್ ಕೂಡ ಬರಲಿಲ್ಲ. ರಾಮನಗರದಲ್ಲಿ 1 ಸೀಟ್ ಕೂಡ ಬರಲಿಲ್ಲ. ನೀನು ನಿಜವಾದ ಅಸಮರ್ಥ ಎಂದು ಕೆಂಡಾಮಂಡಲರಾದರು.
ಈ ವೇಳೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ವಾಗ್ವಾದ ಹೆಚ್ಚಾದ ಕಾರಣ ಸ್ಪೀಕರ್ ಅವರು ಕಲಾಪವನ್ನು ಅಲ್ಪಾವಧಿಗೆ ಮುಂದೂಡಿದರು.