ಬೆಂಗಳೂರು: ಯಾವುದೇ ಸಮುದಾಯಕ್ಕೂ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದು ನಾವು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮುದಾಯದ (Panchamasali Community) ಜೊತೆ ಮತ್ತೆ ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.
ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರವಾಗಿ ಸಮುದಾಯದ ನಾಯಕರುಗಳ ಜೊತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮಾಜಗಳಿಗೆ ನೋವಾಗುವಂತೆ ತೀರ್ಮಾನ ಮಾಡಿತ್ತು. ನಂತರ ಆ ಸರ್ಕಾರವೇ ನಾವು ಯಾವುದೇ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಈ ವಿಚಾರ ನ್ಯಾಯಾಲಯದಲ್ಲಿರುವಾಗ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದರು.
ಈಗ ಚುನಾವಣಾ ನೀತಿ ಸಂಹಿತೆ ಇದೆ. ಇದಾದ ನಂತರ ಸಭೆ ಕರೆದು ಮಾತನಾಡುತ್ತೇವೆ ಎಂದು ಸಮುದಾಯದ ಮುಖಂಡರಿಗೆ ಗೌರವಯುತವಾಗಿ ಹೇಳಿದ್ದೇವೆ. ಅವರ ಭಾವನೆ, ಕಳಕಳಿ ನಮಗೆ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ನಾವು ಅವರ ವಿಚಾರವನ್ನು ಪರಿಗಣಿಸುತ್ತೇವೆ. ಇದೇ ವಿಚಾರಕ್ಕೆ ಹೋರಾಟ ಮಾಡುವವರಿಗೆ ನಾವು ಏನು ಹೇಳಲು ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.