ತುಮಕೂರು: ಮಂಗಳೂರು ಸೈಕೋ ಬಾಂಬರ್ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆತ ಹುಸಿ ಬಾಂಬ್ ಹವ್ಯಾಸಿ ಎಂಬುದು ಗೊತ್ತಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸವಾಲು, ಸಮಸ್ಯೆ, ಆತಂಕ ನಮಗೆ ಗೊತ್ತಿದೆ. ಸಾವು ನೋವು ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಈಗಲೇ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು. ಆರೋಪಿಯನ್ನು ಬಂಧಿಸಿದರೂ ಇದು ಪೊಲೀಸರ ರಿಹರ್ಸಲ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿಯ ಹೇಳಿಕೆಗಳು ಅವರ ಸ್ಥಾನಕ್ಕೆ ಗೌರವ ತರುವಂತಹದಲ್ಲ. ಅವರೂ ರಾಜ್ಯವನ್ನು ಆಳಿದವರು, ಇತ್ತಿಚೆಗೆ ನಿಯಂತ್ರಣ ಕಳಕೊಂಡು ಏನೇನೋ ಮಾತನಾಡುತಿದ್ದಾರೆ ಎಂದು ಲೇವಡಿ ಮಾಡಿದರು.
Advertisement
Advertisement
ಯಾವುದೋ ಒಂದು ಧರ್ಮದ ಮೇಲೆ ಗೂಬೆ ಕೂರಿಸುವುದನ್ನು ಮೊದಲು ನಿಲ್ಲಿಸಲಿ, ದ್ವೇಷ, ಮತ್ಸರ, ವೈನಸ್ಸು ಬೆಳೆಯುತ್ತ ಹೋದರೆ ಸಮಾಜಕ್ಕೆ ಮಾರಕವಾಗುತ್ತದೆ. ವಿರೋಧ ಪಕ್ಷಗಳು ಸಮಾಜ ಒಡೆದು ಬೆಂಕಿ ಹತ್ತಿಸುವ ಕೆಲಸ ಮಾಡುತಿವೆ. ಇದನ್ನು ಬಿಟ್ಟು ಉತ್ತಮ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
Advertisement
ಸಿಎಎ ವಿರೋಧಿಸುವವರಿಗೆ ಮನುಷ್ಯತ್ವ ಇಲ್ಲ. ಮುಸ್ಲಿಮರನ್ನು ದೇಶದಿಂದ ಓಡಿಸುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಂತಹ ಸುಳ್ಳನ್ನು ಹೇಳಲು ಅವರಿಗೆ ಹೇಗೆ ಮನಸ್ಸು ಬರುತ್ತದೋ ಗೊತ್ತಿಲ್ಲ. ಅವರಿಗೆ ಮನುಷ್ಯತ್ವ ಬೇಡವೇ ಎಂದು ಪ್ರಶ್ನಿಸಿದರು.
Advertisement
ಮುಖ್ಯಮಂತ್ರಿಗಳು ವಿದೇಶದಿಂದ ಬಂದ ನಂತರ ಸಂಪುಟ ವಿಸ್ತರಣೆ ಆಗಲಿದೆ. ಡಿಸಿಎಂ ಹುದ್ದೆ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಮುಖ್ಯಮಂತ್ರಿಗಳ ನಿರ್ಧಾರಕ್ಕೆ ನಾವು ಬದ್ಧ ಎಂದರು.