ಬೆಂಗಳೂರು: ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ವಸತಿ ಸಹಿತ ಕೌಶಲ ಅಭಿವೃದ್ಧಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಕೌಶಲ ಕೇಂದ್ರ ಸ್ಥಾಪನೆ ಸಂಬಂಧ ಡಾ.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭಾಗವಹಿಸಿದ್ದರು.
Advertisement
Advertisement
ಉದ್ದಿಮೆಗಳಿಗೆ ಎದುರಾಗಿರುವ ಮಾನವ ಸಂಪನ್ಮೂಲ ಸಮಸ್ಯೆ ನಿವಾರಣೆ ಹಾಗೂ ಯುವಜನರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವುದು ಈ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದ್ದು, ಶಿವಮೊಗ್ಗ ನಗರ ಅಥವಾ ಸಮೀಪದಲ್ಲೇ ಜಾಗ ಹುಡುಕಿ ಕೊಡುವುದಾಗಿ ಸಂಸದರು ಭರವಸೆ ನೀಡಿದರು. ಜಿಲ್ಲಾಧಿಕಾರಿ ಕೂಡ ಇದಕ್ಕೆ ಒಪ್ಪಿದರು.
Advertisement
ಕೇಂದ್ರ ಸರ್ಕಾರ ಕೌಶಲ ಅಭಿವೃದ್ಧಿ ಮತ್ತು ಉದ್ಯಮ ಶೀಲತೆಗೆ ಹೆಚ್ಚಿನ ಒತ್ತು ನೀಡಿದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಕೌಶಲ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದೆ. ದಾಂಡೇಲಿಯಲ್ಲಿ ವಿಟಿಯು ಕೌಶಲ ಕೇಂದ್ರ ಇದ್ದು, ಶಿವಮೊಗ್ಗದಲ್ಲಿ ಇನ್ನೋವೇಶನ್ ಹಬ್ ರೀತಿಯಲ್ಲಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲೇ ಯುವಜನರಿಗೆ ಕೌಶಲ ತರಬೇತಿ ನೀಡಲಾಗುವುದು ಎಂದು ಸಚಿವರು ಹೇಳಿದರು.
Advertisement
ಎಲ್ಲ ಪದವೀಧರರಿಗೂ ತರಬೇತಿ:
ಎಂಜನಿಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೇ ಅರ್ಧದಲ್ಲೇ ಕಲಿಕೆ ಬಿಟ್ಟವರಿಗೂ ಕೌಶಲ ತರಬೇತಿ ನೀಡುವ ಚಿಂತನೆ ಇದೆ. ವಿಟಿಯು ಮೂಲಕ ಕೇಂದ್ರದಲ್ಲಿ 1-3 ವಾರಗಳಿಂದ 5 ತಿಂಗಳವರೆಗಿನ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ತಾಂತ್ರಿಕ ಮತ್ತು ತಾಂತ್ರಿಕೇತರ ಕೌಶಲ ಕಲಿಕೆಗೆ ಅವಕಾಶ ಕಲ್ಪಿಸಲಾಗುವುದು. ಡಿಆರ್‍ಎಫ್ ಮತ್ತು ಸಿಎಸ್‍ಆರ್ ಹಣದಿಂದ ಈ ಕೇಂದ್ರ ನಡೆಸಲಾಗುವುದು’ ಎಂದು ಅವರು ವಿವರಿಸಿದರು.