ಜೈ ಜವಾನ್, ಜೈ ಕಿಸಾನ್ ಜತೆ ‘ಜೈ ಅನ್ವೇಷಕ’ವೂ ಸೇರಬೇಕು: ಡಾ.ಅಶ್ವತ್ಥನಾರಾಯಣ

Public TV
3 Min Read
DCM ASHWATH NARAYAN

ಬೆಂಗಳೂರು: ಭವಿಷ್ಯದಲ್ಲಿ ಭಾರತ ವಿಶ್ವದ ಸೂಪರ್ ಪವರ್ ರಾಷ್ಟ್ರವಾಗುವಲ್ಲಿ ಅನ್ವೇಷಕರು (ಇನ್ನೋವೇಟರ್ಸ್), ಉದ್ಯಮಿಗಳ ಪಾತ್ರ ಮಹತ್ವದ್ದು ಎಂದಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ, ಮುಂದಿನ ದಿನಗಳಲ್ಲಿ ಜೈ ಜವಾನ್, ಜೈ ಕಿಸಾನ್ ಜತೆ ‘ಜೈ ಅನ್ವೇಷಕ’ವೂ ಸೇರಬೇಕು ಎಂದು ಹೇಳಿದ್ದಾರೆ.

ನಗರದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ಮಂಗಳವಾರ ಆಯೋಜಿಸಿದ್ದ ಎಲಿವೇಟ್ ಕಾಲ್-2, ಉನ್ನತಿ ಕಾರ್ಯಕ್ರಮದಲ್ಲಿ ಅಶ್ವತ್ಥ ನಾರಾಯಣ ಭಾಗವಹಿಸಿದ್ದರು. ಈ ವೇಳೆ ನಾವೀನ್ಯತೆಯುಳ್ಳ ವಾಣಿಜ್ಯೋದ್ಯಮಿಗಳಿಗೆ 50 ಲಕ್ಷ ರೂ.ವರೆಗೆ ಅನುದಾನ ಬೆಂಬಲ ನೀಡುವುದೇ ಎಲಿವೇಟ್, ಉನ್ನತಿ ಕಾರ್ಯಕ್ರಮವಾಗಿದ್ದು, ಸಮಾರಂಭದಲ್ಲಿ 113 ಸ್ಟಾರ್ಟ್‍ಅಪ್‍ಗಳನ್ನು ವಿಜೇತರನ್ನಾಗಿ ಘೋಷಿಸಲಾಗಿದೆ.

DCM ASHWATH NARAYAN A

ಭಾರತ ಸೂಪರ್ ಪವರ್ ಆಗುವುದೆಂಬ ವಿಶ್ವಾಸ ಮೂಡಿರುವುದೇ ಅನ್ವೇಷಕರು, ಉದ್ಯಮಿಗಳಿಂದ. ಇವರಿಲ್ಲದೇ ಭವಿಷ್ಯ ಇಲ್ಲ. ಅದಕ್ಕಾಗಿಯೇ ‘ಜೈ ಇನ್ನೋವೇಟರ್ಸ್’ ಎಂದೂ ಹೇಳಬೇಕು. ಸಮಾಜದಲ್ಲಿ ಭರವಸೆ ಮೂಡುತ್ತಿರುವುದು ಅನ್ವೇಷಕರಿಂದ, ಇವರಿಲ್ಲದಿದ್ದರೆ ಜನಜೀವನ ಸಮಸ್ಯೆಗಳಿಂದ ತುಂಬಿ ಹೋಗುತ್ತಿತ್ತು. ಇವರಿಂದ ಸಮಾಜ, ಜೀವನ ಮಟ್ಟ ಸುಧಾರಿಸುತ್ತಿದೆ. ಇಂಥ ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡಲು ಖುಷಿ ಆಗುತ್ತಿದೆ. ಇಂಥ ಪ್ರತಿಭಾನ್ವಿತರ ಪ್ರಯತ್ನಕ್ಕೆ ನಮ್ಮ ಸರ್ಕಾರದ ಬೆಂಬಲ ಇರುತ್ತದೆ ಎಂದು ಹೇಳಿದರು.

ನಾಡಿನಲ್ಲಿರುವ ಪ್ರತಿಭಾನ್ವಿತರನ್ನು ಗುರುತಿಸಿ ಬೆಂಬಲಿಸಲೆಂದೇ ‘ಗ್ರಾಂಟ್ ಇನ್ ನೀಡ್’ ಕಾರ್ಯಕ್ರಮ ರೂಪಿಸಲಾಗಿದೆ. ಅನ್ವೇಷಕರಿಗೆ ಅವರ ಕೆಲಸ, ಜವಾಬ್ದಾರಿ ಗೊತ್ತಿದೆ. ಅವರ ಪ್ರತಿಭೆಯನ್ನು ಗುರುತಿಸಿ, ಬೆಂಬಲ ನೀಡುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ಈ ಬಜೆಟ್‍ನಲ್ಲಿ ಇನ್ನೋವೇಷನ್ ಹಬ್ ಸ್ಥಾಪನೆ ಪ್ರಸ್ತಾಪ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ಆಯ್ಕೆ ಆದವರಿಗೆ ಮುಂದಿನ ಹಂತದಲ್ಲಿ ಇನ್ನೋವೇಷನ್ ಹಬ್ ಮೂಲಕ ಮಾರ್ಗದರ್ಶನ, ಪೂರಕ ನೆರವು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.

DCM ASHWATH NARAYAN C

ಉದ್ಯಮ ಸ್ನೇಹಿ ಕರ್ನಾಟಕ:
ಈ ಸ್ಪರ್ಧೆಯಲ್ಲಿ ಆಯ್ಕೆಯಾದವರಿಗೆ ಅಭಿನಂದನೆ ಎಂದ ಡಿಸಿಎಂ, ಆಯ್ಕೆ ಆಗದವರು ಬೇಸರ ಮಾಡಿಕೊಳ್ಳವ ಅಗತ್ಯ ಇಲ್ಲ, ನಿಮ್ಮ ಪ್ರಯತ್ನ ಮುಂದುವರಿಯಲಿ. ಯಾರೂ ಧೃತಿಗೆಡಬೇಕಿಲ್ಲ. ಇಂಥ ಸ್ಪರ್ಧೆಯಲ್ಲಿ ಭಾಗವಹಿಸಿರುವುದೇ ದೊಡ್ಡದು ಎಂದು ಹೇಳಿದರು.

ಈಸ್ ಆಫ್ ಡೂಯಿಂಗ್ ಬಿಸಿನೆಸ್‍ನ (ಸುಲಲಿತ ವ್ಯವಹಾರ) ಪರಿಣಾಮಕಾರಿ ಜಾರಿ ಮೂಲಕ ನಂ.1 ಸ್ಥಾನದಲ್ಲಿರುವುದು ಕರ್ನಾಟಕದ ಉದ್ದೇಶ. ಉದ್ದಿಮೆಗೆ ಯಾವುದೇ ರೀತಿಯ ಅಡಚಣೆ ಇಲ್ಲದೇ ಸಂತೋಷದಿಂದ ಕೆಲಸ ಮಾಡುವ ವ್ಯವಸ್ಥೆ ನಿರ್ಮಾಣ ಮಾಡಿ, ವಿಶ್ವದಲ್ಲೇ ಕರ್ನಾಟಕ ಉದ್ಯಮಿ ಮತ್ತು ಉದ್ಯಮ ಸ್ನೇಹಿ ಸ್ಥಳ ಆಗಿರಬೇಕು ಎಂದು ಪಣ ತೊಟ್ಟು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

DCM ASHWATH NARAYAN B

ಉದ್ಯಮಿಗಳ ರಿಸ್ಕ್ ದೊಡ್ಡದು:
ರಾಜಕಾರಣಿಗಳೇ ಹೆಚ್ಚು ರಿಸ್ಕ್ ತೆಗೆದುಕೊಳ್ಳುತ್ತಾರೆ ಎಂಬ ಭಾವನೆ ಇದೆ. ಆದರೆ ಉದ್ಯಮಿಗಳು ಎದುರಿಸುವ ಸವಾಲಿನ ಮುಂದೆ ನಮ್ಮದು ಏನೂ ಇಲ್ಲ ಅನಿಸಿದೆ. ಉದ್ಯಮಿಗಳಾಗಿ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಹೊಸ ಆಲೋಚನೆ, ಪರಿಹಾರ ಮತ್ತು ಸೇವೆ ಒದಗಿಸುವ ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಯೋಚಿಸುತ್ತಾರೆ. ಅಂಥವರಿಗಾಗಿಯೇ ವ್ಯವಸ್ಥೆಯಲ್ಲಿ ಸ್ಟಾರ್ಟ್‍ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಮುದ್ರಾ ಮುಂತಾದ ಹಲವಾರು ಕಾರ್ಯಕ್ರಮಗಳಿವೆ. ರಾಜ್ಯ ಸರ್ಕಾರದಲ್ಲೂ ಹಲವು ನಿಗಮಗಳ ಮೂಲಕ ಪ್ರೋತ್ಸಾಹ ನೀಡಲು ಅವಕಾಶ ಇದ್ದು, ಇನ್ನೂ ಹಲವು ಹೊಸ ಕಾರ್ಯಕ್ರಮಗಳ ರೂಪಿಸುವ ಪ್ರಯತ್ನವೂ ನಡೆದಿದೆ. ಈಗಾಗಲೇ ಟ್ಯಾಲೆಂಟ್ ಆಕ್ಸಿಲರೇಟರ್, ಕರ್ನಾಟಕ ಟೆಕ್ನಾಲಜಿ ವಿಷನ್ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಹೊಸ ಐಟಿ ನೀತಿ ಜಾರಿ ತರಲಾಗುವುದು ಎಂದು ತಿಳಿಸಿದರು.

DCM ASHWATH NARAYAN E

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಬೆಂಗಳೂರು ಮಿಂಚಬೇಕು:
ಉತ್ತರ ಅಮೆರಿಕ, ಯೂರೋಪ್‍ನ ಗಮನ ಸೆಳೆಯುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ. ಆದರೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ನಮ್ಮ ಬೆಂಗಳೂರಿನ ಸಾಮಥ್ರ್ಯ ಗೊತ್ತಿಲ್ಲ. ಏಷ್ಯಾದ ಇತರ ರಾಷ್ಟ್ರಗಳಿಗೆ ಬೆಂಗಳೂರಿನ ಸಾಮಥ್ರ್ಯ ತಿಳಿಸಿಕೊಡುವ ಪ್ರಯತ್ನಗಳು ಆಗಬೇಕು. ನಮ್ಮವರಷ್ಟೇ ಹೊರಗಿನಿಂದ ಬಂದವರೂ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರುವುದನ್ನು ಕಂಡಾಗ ಬಹಳ ಸಂತೋಷವಾಗುತ್ತದೆ. ಬೆಂಗಳೂರಿನ ಅಭಿವೃದ್ಧಿಗೆ ಅವರ ನಿಸ್ವಾರ್ಥ ಸೇವೆ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಎಲಿವೇಟ್ ಕರ್ನಾಟಕದ ನಿರ್ದೇಶಕ ಪ್ರಶಾಂತ್ ಮಿಶ್ರಾ, ರಾಜ್ಯದ ಸ್ಟಾರ್ಟ್‍ಅಪ್ ವಿಷನ್ ಗ್ರೂಪ್‍ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ಉಪಸ್ಥಿತರಿದ್ದರು.

DCM ASHWATH NARAYAN F

ವಿಜೇತರ ವಿವರ:
2019-20ನೇ ಹಣಕಾಸು ವರ್ಷದ ಒಟ್ಟು 113 ವಿಜೇತರ ಪೈಕಿ ಎಲಿವೇಟ್ ಕಾಲ್-2ರಲ್ಲಿ 93 ಸ್ಟಾರ್ಟ್‍ಅಪ್‍ಗಳು ಹಾಗೂ ಉನ್ನತಿ ಕಾರ್ಯಕ್ರಮದ ಅಡಿಯಲ್ಲಿ 20 ಸ್ಟಾರ್ಟ್‍ಅಪ್‍ಗಳಿವೆ. ಇದರಲ್ಲಿ 33 ಮಹಿಳಾ ವಾಣಿಜ್ಯೋದ್ಯಮಿಗಳಿಂದ ಸ್ಥಾಪನೆಗೊಂಡಿವೆ. 38 ಸ್ಟಾರ್ಟ್‍ಅಪ್‍ಗಳು 2 ಹಾಗೂ 3 ಹಂತದ್ದಾಗಿವೆ. ಬೆಂಗಳೂರಿನ 78, ಧಾರವಾಡದ 13, ಬೆಳಗಾವಿ 4, ಕಲಬುರಗಿ ಮತ್ತು ತುಮಕೂರಿನಿಂದ ತಲಾ 3, ಬೀದರ್, ಬೆಂಗಳೂರು ಗ್ರಾಮೀಣ, ಬಳ್ಳಾರಿಯ ತಲಾ 2, ರಾಮನಗರ, ಚಿಕ್ಕಮಗಳೂರು, ಮೈಸೂರು, ರಾಯಚೂರು, ಹಾವೇರಿ ಹಾಗೂ ಉಡುಪಿಯ ತಲಾ 1 ಸ್ಟಾರ್ಟ್‍ಅಪ್‍ಗಳು ಸ್ಪರ್ಧೆಯಲ್ಲಿ ಗೆದ್ದಿವೆ.

ಎಲಿವೇಟ್- ಉನ್ನತಿ ಅಡಿ 20 ವಿಜೇತರ ಪೈಕಿ 15 ಸ್ಟಾರ್ಟ್‍ಅಪ್‍ಗಳು ಪರಿಶಿಷ್ಟ ಜಾತಿ ಹಾಗೂ 5 ಪರಿಶಿಷ್ಟ ಪಂಗಡದ ಹಿನ್ನೆಲೆಯಿಂದ ಬಂದವರು. 113 ವಿಜೇತ ಸ್ಟಾರ್ಟ್‍ಅಪ್‍ಗಳು 50 ಲಕ್ಷ ರೂ. ವರೆಗಿನ ಅನುದಾನಕ್ಕೆ ಅರ್ಹರನ್ನಾಗಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *