ಚಿಕ್ಕಬಳ್ಳಾಪುರ: ಡಿಸಿಎಂ ಅಶ್ವಥ್ ನಾರಾಯಣ್ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಜೊತೆ ಮಾಡಬೇಕಾದ ಸಭೆಯನ್ನು ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಅಶ್ವಥ್ ನಾರಾಯಣ್ ಜಿಲ್ಲೆಗೆ ಆಗಮಿಸಿದ್ದಾರೆ. ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಭೆ ನಡೆಸಿದರು. ಸಭೆ ನಂತರ ಮಾತನಾಡಿದ ಡಿಸಿಎಂ, ನಂದಿಗಿರಿಧಾಮದ ಸಮಗ್ರ ಅಭಿವೃದ್ಧಿ ಹಾಗೂ ಬೋಗನಂಧಿಶ್ವರ ದೇವಾಲಯದಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಜಿಲ್ಲೆಯಲ್ಲಿನ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ಖಾಸಗಿ ರೆಸಾರ್ಟ್ನಲ್ಲಿ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಕೇವಲ ನಂದಿಗಿರಿಧಾಮ ಮಾತ್ರವಲ್ಲ ಜಿಲ್ಲೆಯ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಜಾಗ ಸೂಕ್ತವಾಗಿತ್ತು. ಹೀಗಾಗಿ ಇಲ್ಲಿ ಸಭೆ ನಡೆಸಲಾಗಿದೆ ಹೊರತು ಬೇರೆನೂ ಉದ್ದೇಶ ಇಲ್ಲ ಎಂದು ಸಭೆ ಬಗ್ಗೆ ಸಮರ್ಥನೆ ಮಾಡಿಕೊಂಡರು.
ಸರ್ಕಾರಿ ಕಚೇರಿಗಳಲ್ಲಿ ಅಥವಾ ನಂದಿಬೆಟ್ಟದಲ್ಲಿ ಮಾಡಬೇಕಾದ ಸಭೆಯನ್ನು ಖಾಸಗಿ ರೆಸಾರ್ಟ್‍ನಲ್ಲಿಆಯೋಜಿಸಿದ್ದು ಯಾಕೆ? ಸರ್ಕಾರದ ದುಡ್ಡಲ್ಲಿ ಖಾಸಗಿ ರೆಸಾರ್ಟ್ನಲ್ಲಿ ಸಭೆ ನಡೆಸಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸದ್ಯ ಸಭೆ ನಂತರ ಡಿಸಿಎಂ ವಿಶ್ವವಿಖ್ಯಾತ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟೂರು ಮುದ್ದೇನಹಳ್ಳಿಗೆ ಆಗಮಿಸಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿಶ್ವೇಶ್ವರಯ್ಯನವರು ವಾಸವಿದ್ದ ಮನೆ ಹಾಗೂ ಮ್ಯೂಸಿಯಂಗೆ ಭೇಟಿ ನೀಡಿದರು.