– ಬಿಜೆಪಿಯಲ್ಲಿದ್ದು ಶರತ್ ಟಿಪ್ಪು ಜಯಂತಿ ಆಚರಿಸಲ್ಲ
– ಸರ್ಕಾರವನ್ನೇ ಉಳಿಸಿಕೊಳ್ಳದವರು ಉಪಚುನಾವಣೆ ಗೆಲ್ತಾರಾ?
ಉಡುಪಿ: ನಮ್ಮ ಪಕ್ಷದ ಯಾವುದೇ ನಾಯಕರು, ಕಾರ್ಯಕರ್ತರು ನಾವು ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ. ನಮ್ಮ ಪಕ್ಷದವರಲ್ಲದವರು ಮಾತ್ರ ಟಿಪ್ಪು ಜಯಂತಿ ಆಚರಿಸಲು ಸಾಧ್ಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿರುಗೇಟು ನೀಡಿದ್ದಾರೆ.
ತುಮಕೂರು ಬಿಜೆಪಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರ ಟಿಪ್ಪು ಜಯಂತಿ ಆಚರಿಸುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸಲ್ಲ. ನಮ್ಮ ಪಕ್ಷದಲ್ಲಿ ಇಲ್ಲದವರು ಟಿಪ್ಪು ಜಯಂತಿ ಆಚರಿಸ್ತಾರೆ. ಈ ಬಗ್ಗೆ ಬಿಜೆಪಿಗೆ ಸ್ಪಷ್ಟತೆ ಇದೆ. ನಮ್ಮ ಪಕ್ಷದ ಯಾವುದೇ ನಾಯಕರು, ಕಾರ್ಯಕರ್ತರು ನಾವು ಟಿಪ್ಪು ಜಯಂತಿಯನ್ನು ಆಚರಿಸಲ್ಲ. ನಮ್ಮ ಪಕ್ಷದವರಲ್ಲದವರು ಮಾತ್ರ ಟಿಪ್ಪು ಜಯಂತಿ ಆಚರಿಸಲು ಸಾಧ್ಯ ಎಂದರು.
Advertisement
Advertisement
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆ ಬಂದಿರುವುದಕ್ಕೂ ಉಪಚುನಾವಣೆಗೂ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಅವರು ಇದ್ದ ಸರ್ಕಾರವನ್ನೇ ಉಳಿಸಿಕೊಂಡಿಲ್ಲ. ಈಗ ಉಪಚುನಾವಣೆಯಲ್ಲಿ ಗೆಲ್ಲಲು ಕಾರಣರಾಗುತ್ತಾರಾ ಎಂದು ಅಶ್ವಥ್ ನಾರಾಯಣ ಟಾಂಗ್ ಕೊಟ್ಟರು.
Advertisement
ಇಲಿ ಬಂದರೆ ಹುಲಿ ಬಂತು ಅನ್ನಲಾಗುತ್ತಿದೆ. ಅವರ ಬಿಡುಗಡೆಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಎಲ್ಲೂ ಸಲ್ಲದವರು ಈಗ ಉಪಚುನಾವಣೆಯಲ್ಲಿ ಸಲ್ಲುತ್ತಾರಾ? ಎಂದು ಕುಟುಕಿದರು. ಒಕ್ಕಲಿಗ ಸಮಾಜಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ಬೇಕು. ಭ್ರಷ್ಟಾಚಾರ ಪೂರಕ ಸಮಾಜ ಕಟ್ಟವುದು ಅಸಾಧ್ಯ. ಜಾತಿಯ ಹಿನ್ನೆಲೆಯಲ್ಲಿ ರಕ್ಷಣೆ ಪಡೆಯುವುದು ಸರಿಯಲ್ಲ. ವ್ಯಕ್ತಿಗತ ರಾಜಕೀಯಕ್ಕೆ ನಾವು ಒತ್ತು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಒಂದು ಕಡೆ ಡಿಸಿಎಂ ಲಕ್ಷ್ಮಣ ಸವದಿ ಅನರ್ಹ ಶಾಸಕರಿಗೂ-ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಹೇಳಿದರೆ ಇನ್ನೊಂದೆಡೆ ಡಿಸಿಎಂ ಅಶ್ವತ್ಥ ನಾರಾಯಣ ಕೆಟ್ಟ ಸಮ್ಮಿಶ್ರ ಸರಕಾರ ಪತನಗೊಂಡಿದ್ದು ಅನರ್ಹ ಶಾಸಕರ ಕೃಪೆಯಿಂದ ಆ ಶಾಸಕರಿಗೆ ಮಾನ್ಯತೆ ಸಿಗದೆ ಮತ್ಯಾರಿಗೆ ಸಿಗಬೇಕು ಎಂದು ಹೇಳಿದರು.
ಅನರ್ಹ ಶಾಸಕರು ಸಮಾಜದ ರಕ್ಷಣೆಗೆ ಬಂದವರು. ಅವರು ಸತ್ಕಾರ್ಯ ಮಾಡಿದವರು. ಈವರೆಗೆ ಬಿಜೆಪಿ ಪಕ್ಷ ಸೇರಿಲ್ಲ, ಸೇರ್ಪಡೆ ನಂತರ ಯಾರಿಗೆ ಟಿಕೆಟ್ ಕೊಡಬೇಕು ಅಂತ ಪಕ್ಷ ನಿರ್ಧರಿಸಲಾಗುವುದು. ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಸಂಪೂರ್ಣ ಅಸ್ಥಿತ್ವ ಕಳೆದುಕೊಂಡಿವೆ. ಇವರ ಒಳಜಗಳ, ಸಮಾಜ ಒಡೆಯುವ ಕಾರ್ಯಕ್ಕೆ ಜನ ಬೇಸತ್ತಿದ್ದಾರೆ. ಬಲಿಷ್ಠ ವಿಪಕ್ಷವಾಗಿ ಕೆಲಸ ಮಾಡುತ್ತಿಲ್ಲ ಹೀಗಾಗಿ ಉಪಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿ ಪ್ರವಾಸದಲ್ಲಿದ್ದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಕೃಷ್ಣಮಠಕ್ಕೆ ಭೇಟಿ ನೀಡಿದರು. ಈ ವೇಳೆ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು. ಕೆಲ ಹೊತ್ತು ಮಠದಲ್ಲೇ ಕಳೆದ ಅವರು ಗರ್ಭಗುಡಿಯ ಚಿನ್ನದ ಹೊದಿಕೆಯನ್ನು ವೀಕ್ಷಿಸಿದರು. ನಂತರ ಪರ್ಯಾಯ ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಡಿಸಿಎಂ ಬಳಿ ಪರ್ಯಾಯ ಪಲಿಮಾರು ಶ್ರೀಗಳು ಸಂಸ್ಕೃತ ಕಾಲೇಜಿನ ಬೇಡಿಕೆಯಿಟ್ಟರು. ಈ ವೇಳೆ ಕಾಪು ಶಾಸಕ ಲಾಲಾಜೀ ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್ ಇದ್ದರು.