-ಯಾವುದೇ ಕಾರಣಕ್ಕೂ ಬಿಜೆಪಿ ಟಿಪ್ಪು ಜಯಂತಿ ಮಾಡಲ್ಲ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸದ್ಯ ಟಿಪ್ಪು ಜಯಂತಿ ವಿಚಾರ ಭಾರೀ ಸುದ್ದಿಯಲ್ಲಿದೆ. ಬಿಜೆಪಿ ಹಾಗೂ ವಿಪಕ್ಷ ನಾಯಕರು ಈ ಬಗ್ಗೆ ಪರ- ವಿರೋಧ ಪ್ರತಿಕ್ರಿಯೆ ನೀಡುತ್ತಲೇ ಬರುತ್ತಿದ್ದಾರೆ. ಇದೇ ಬೆನ್ನಲ್ಲೆ ಡಿಸಿಎಂ ಅಶ್ವಥ್ ನಾರಾಯಣ್ ಅವರು ಟಿಪ್ಪು ಜಯಂತಿ ಆಚರಿಸುವವರು ಬಿಜೆಪಿಯವರೇ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಟಿಪ್ಪು ಜಯಂತಿ ಮಾಡುವುದನ್ನು ನಮ್ಮ ಸರ್ಕಾರ ಸಂಪೂರ್ಣವಾಗಿ ವಿರೋಧಿಸುತ್ತದೆ. ಟಿಪ್ಪು ಜಯಂತಿ ಆಚರಿಸಲು ಇಚ್ಛಿಸುವವರು ವೈಯಕ್ತಿಕವಾಗಿ ಮಾಡಿಕೊಳ್ಳಲಿ, ಆದರೆ ಯಾವುದೇ ಕಾರಣಕ್ಕೂ ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸಲ್ಲ. ಈ ವೇಳೆ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಟಿಪ್ಪು ಜಯಂತಿ ಮಾಡುತ್ತೇವೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಯಾರಾದರೂ ಟಿಪ್ಪು ಜಯಂತಿ ಆಚರಿಸಿದರೇ ಅವರು ನಮ್ಮವರೇ ಅಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಇತ್ತ ಶಿವಮೊಗ್ಗದಲ್ಲಿ ಟಿಪ್ಪು ಜಯಂತಿ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೂಡ ವಾಗ್ದಾಳಿ ನಡೆಸಿದ್ದಾರೆ. ಟಿಪ್ಪು ಜಯಂತಿಯನ್ನು ಕಾಂಗ್ರೆಸ್ಸಿನವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಟಿಪ್ಪು ಜಯಂತಿ ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಮೊದಲು ಬಿಡಲಿ. ಯಾರಿಗೆ ಬೇಕೋ ಅವರು ಅವರವರ ಮನೆಯಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಟಿಪ್ಪು ಹೆಸರಿನಲ್ಲಿ ಮುಸಲ್ಮಾನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಗುಡುಗಿದ್ದಾರೆ.
Advertisement
Advertisement
ಹಾಗೆಯೇ ಈ ಬಗ್ಗೆ ವಿಜಯಪುರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕೂಡ ಪ್ರತಿಕ್ರಿಯಿಸಿ, ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮ ಸಂಪ್ರದಾಯದಲ್ಲಿ ಮೂರ್ತಿ ಪೂಜೆಯೂ ಇಲ್ಲ. ಈ ಹಿಂದೆ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ ಈ ಸಂಪ್ರದಾಯವೇ ಇಲ್ಲ ಎಂದು ಹೇಳಿದ್ದಾರೆ.