ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಕಳ್ಳರು ಭಾನುವಾರ ತಡರಾತ್ರಿ ಕನ್ನ ಹಾಕಿ ಪರಾರಿಯಾಗಿದ್ದಾರೆ.
ಭಾನುವಾರ ತಡರಾತ್ರಿ ಕೆರೂರು ಪಟ್ಟಣದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಕಳ್ಳರು ಕನ್ನಹಾಕಿದ್ದಾರೆ. ಗ್ಯಾಸ್ ಕಟ್ಟರ್ ಗಳನ್ನು ಬಳಸಿಕೊಂಡು, ಬ್ಯಾಂಕಿನ ಹಿಂಭಾಗದ ಕಿಟಕಿ ಒಡೆದು ಒಳನುಗ್ಗಿದ ಕಳ್ಳರು, ಸಾಕಷ್ಟು ಪ್ರಮಾಣದ ದುಡ್ಡು ದೋಚಿ ಪರಾರಿಯಾಗಿದ್ದಾರೆ.
ಇಂದು ಬ್ಯಾಂಕಿಗೆ ಅಧಿಕಾರಿಗಳು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬ್ಯಾಂಕ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಕಳ್ಳತನಕ್ಕೆ ಬಳಸಲಾಗಿದ್ದ ಕೆಲವು ವಸ್ತುಗಳು ದೊರೆತಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೇ ಬ್ಯಾಂಕ್ ಸಿಬ್ಬಂದಿಯವರು ಎಷ್ಟು ಪ್ರಮಾಣದ ಹಣ ಕಳುವಾಗಿದೆ ಎಂದು ಸ್ಪಷ್ಟಪಡಿಸಿಲ್ಲ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಗಿರುವುದರಿಂದ ಬ್ಯಾಂಕ್ ನ ಹಿರಿಯ ಅಧಿಕಾರಿಗಳ ಭೇಟಿ ನಂತರ ತಿಳಿಯುತ್ತದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.