– ಬಿಜೆಪಿ ಮುಖಂಡನ ಮೇಲೆ ಆರೋಪ
ಬಾಗಲಕೋಟೆ: ಡಿಸಿಸಿ ಬ್ಯಾಂಕಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬಿಜೆಪಿ ಮುಖಂಡನೋರ್ವ ಆರು ಜನರಿಂದ 20 ಲಕ್ಷ ರೂ. ಲಪಾಟಿಯಿಸಿ ವಂಚಿಸಿದ್ದಾನೆಂಬ ಆರೋಪ ಕೇಳಿಬಂದಿದೆ.
ಬಾಗಲಕೋಟೆಯಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಮುಖಂಡ ರಾಘವೇಂದ್ರ ನಾಗೂರ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಘವೇಂದ್ರ ನಾಗೂರು ಬಾಗಲಕೋಟೆ ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾಗಿದ್ದು, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರ ಆಪ್ತ ಎಂದು ಹೇಳಿಕೊಂಡು ಮೋಸಮಾಡಿದ್ದಾನೆ. ಮಧ್ಯವರ್ತಿ ಅಶೋಕ್ ಚಿಲ್ಲಾ ಕಡೆಯಿಂದ ಹಣ ಪಡೆದು ಮೋಸಮಾಡಿದ್ದಾನೆ ಎಂದು ಹೇಳಲಾಗಿದೆ.
Advertisement
Advertisement
ಹಣ ಕೊಟ್ಟವರ ಕಾಟ ತಾಳಲಾರದೆ ಅಶೋಕ್ ಚಿಲ್ಲಾ ತನ್ನ ಅಳಲನ್ನು ಪತ್ರದಲ್ಲಿ ಬರೆದು, ಸೆಲ್ಫಿ ವಿಡಿಯೋ ಮಾಡಿ ನಾಪತ್ತೆಯಾಗಿದ್ದಾನೆ. ಆರು ಜನ ಯುವಕರಿಂದ 20.50 ಲಕ್ಷ ರೂ. ಹಾಗೂ ಮಧ್ಯವರ್ತಿ ಅಶೋಕ್ ಚಿಲ್ಲಾರಿಂದ ನಾಲ್ಕು ಲಕ್ಷ ರೂ. ಸೇರಿ ಒಟ್ಟು 24.50 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾನೆ ಎಂದು ಅಶೋಕ್ ಚಿಲ್ಲಾ ತನ್ನ ಸೆಲ್ಫಿ ವಿಡೋದಲ್ಲಿ ಆರೋಪಿಸಿದ್ದಾನೆ.
Advertisement
Advertisement
ಆದರೆ ರಾಘವೇಂದ್ರ ನಾಗೂರು ಆರೋಪ ತಳ್ಳಿ ಹಾಕಿದ್ದು, ಹಣ ಕೊಟ್ಟವರಿಗೆ ತನ್ನ ಖಾತೆಯ ಚೆಕ್ ಬರೆದುಕೊಟ್ಟಿರುವ ಅಶೋಕ್ ಚಿಲ್ಲಾನೇ ವಂಚಕ. ನನಗೆ ಕೊಡುವ ಹಣ ಕೇಳಲು ಹೋದಾಗ ಕನ್ಫರ್ಮೇಶನ್ ಗೆಂದು ಅಶೋಕ್ ವಿಡಿಯೋ ಮಾಡಿಕೊಂಡಿದ್ದಾನೆ. ಈಗ ಈ ರೀತಿ ಸುಳ್ಳು ಆರೋಪ ಹೊರಿಸಿದ್ದಾನೆ ಎಂದು ರಾಘವೇಂದ್ರ ಹೇಳುತ್ತಿದ್ದಾರೆ. ಇತ್ತ ಅಶೋಕ್ ಸೆಲ್ಫಿ ವಿಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಮಾರ್ಚ್ 3ರಿಂದ ನಾಪತ್ತೆಯಾಗಿದ್ದಾನೆ. ಸದ್ಯ ಅಶೋಕ್ ಬಗ್ಗೆ ನವನಗರ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದ್ದು, ಅಶೋಕ್ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.