ಅಶುತೋಶ್‌ ಬೆಂಕಿ ಆಟಕ್ಕೆ ಲಕ್ನೋ ಬರ್ನ್‌! – ಇಂಪ್ಯಾಕ್ಟ್‌ ಪ್ಲೇಯರ್‌ ಆಟ, ಡೆಲ್ಲಿಗೆ ರೋಚಕ ಜಯ

Public TV
3 Min Read
DC vs LSG IPL 2025 Ashutosh Sharma shines as Delhi Capitals beat Lucknow Super Giants by 1 wicket

ವಿಶಾಖಪಟ್ಟಣ: 7 ರನ್‌ಗಳಿಗೆ 3 ವಿಕೆಟ್‌ ಪತನಗೊಂಡಿದ್ದರೂ ಕೊನೆಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕ್ರೀಸ್‌ಗ ಬಂದ ಅಶುತೋಷ್‌ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡ  ಲಕ್ನೋ ವಿರುದ್ಧ 1 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಲಕ್ನೋ 8 ವಿಕೆಟ್‌ ನಷ್ಟಕ್ಕೆ 209 ರನ್‌ ಹೊಡೆಯಿತು. ಕಠಿಣ ಸವಾಲು ಬೆನ್ನತ್ತಿದ ಡೆಲ್ಲಿ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಅಂತಿಮವಾಗಿ 19.3 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 211 ರನ್‌ಗಳಿಸಿ ಗೆಲುವು ಸಾಧಿಸಿತು.

ಡೆಲ್ಲಿ 7 ರನ್‌ಗಳಿಸುವಷ್ಟರಲ್ಲೇ 3 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಅಕ್ಷರ್‌ ಪಟೇಲ್‌ 22 ರನ್ (11 ಎಸೆತ, 3 ಬೌಂಡರಿ, 1 ಸಿಕ್ಸ್‌), ಡುಪ್ಲೆಸಿಸ್‌ 29 ರನ್‌(18 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ ಸ್ವಲ್ಪ ಚೇತರಿಕೆ ನೀಡಿದರು. ಟ್ರಿಸ್ಟಾನ್ ಸ್ಟಬ್ಸ್ 34 ರನ್‌(22 ಎಸೆತ, 1 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದಾಗ ಪಂದ್ಯ ಲಕ್ನೋ ಪರ ವಾಲಿತ್ತು.

7ನೇ ವಿಕೆಟಿಗೆ ಅಶುತೋಷ್‌ ಮತ್ತು ನಿಗಮ್‌ 22 ಎಸೆತಗಳಲ್ಲಿ 55 ರನ್‌ ಹೊಡೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಡೆಲ್ಲಿ ಪರ 16ನೇ ಓವರ್‌ನಲ್ಲಿ 20 ರನ್‌, 17 ನೇ ಓವರ್‌ನಲ್ಲಿ 3 ರನ್‌, 18ನೇ ಓವರ್‌ನಲ್ಲಿ 17 ರನ್‌, 19ನೇ ಓವರ್‌ನಲ್ಲಿ 16 ರನ್‌ ಬಂದಿತ್ತು. 20ನೇ ಓವರ್‌ನಲ್ಲಿ 6 ರನ್‌ ಬೇಕಿತ್ತು. ಸ್ಟ್ರೈಕ್‌ನಲ್ಲಿದ್ದ ಮೋಹಿತ್‌ ಶರ್ಮಾ ಮೊದಲ ಎಸೆತದಲ್ಲಿ ಸ್ಟಂಪ್‌ ಔಟಾಗುವ ಸಾಧ್ಯತೆ ಇತ್ತು. ಎರಡನೇ ಎಸೆತದಲ್ಲಿ 1 ರನ್‌ ಓಡಿ ಅಶುತೋಷ್‌ಗೆ ಸ್ಟ್ರೈಕ್‌ ನೀಡಿದರು.3ನೇ ಎಸೆತವನ್ನು ಅಶುತೋಶ್‌ ಸಿಕ್ಸ್‌ಗೆ ಅಟ್ಟುವ ಮೂಲಕ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

ವಿಪ್ರಜ್‌ ನಿಗಮ್‌ 39 ರನ್‌(15 ಎಸೆತ, 5 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರೆ ಅಶುತೋಷ್‌ ಔಟಾಗದೇ 66 ರನ್‌(31 ಎಸೆತ, 5 ಬೌಂಡರಿ, 5 ಸಿಕ್ಸ್‌) ಸಿಡಿಸಿ ಗೆಲುವು ತಂದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಕ್ನೋ ಉತ್ತಮ ಆರಂಭ ಪಡೆಯಿತು. ಮಾಕ್ರಮ್‌ ಮತ್ತು ಮಿಚೆಲ್‌ ಮಾರ್ಶ್‌ ಮೊದಲ ವಿಕೆಟಿಗೆ 46 ರನ್‌ ಹೊಡೆದರು. ಎರಡನೇ ವಿಕೆಟಿಗೆ ಮಾರ್ಶ್‌ ಮತ್ತು ನಿಕೂಲಸ್‌ ಪೂರನ್‌ 42 ರನ್‌ ಎಸೆತಗಳಲ್ಲಿ 87 ರನ್‌ ಜೊತೆಯಾಟವಾಡಿದರು.

ಮಾರ್ಶ್‌ 72 ರನ್‌(36 ಎಸೆತ, 6 ಬೌಂಡರಿ, 6 ಸಿಕ್ಸರ್‌) ಹೊಡೆದರೆ ಪೂರನ್‌ 75 ರನ್‌(30 ಎಸೆತ, 6 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾದರು. ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ ಔಟಾಗದೇ 27 ರನ್‌( 19 ಎಸೆತ, 1 ಬೌಂಡರಿ, 2 ಸಿಕ್ಸ್‌) ಸಿಡಿಸಿದ ಪರಿಣಾಮ ಲಕ್ನೋ 200 ರನ್‌ಗಳ ಗಡಿಯನ್ನು ದಾಟಿತು.

Share This Article