ಬೆಂಗಳೂರು: ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ ಸಂಬಂಧ ಕಂದಾಯ ಇಲಾಖೆ ಕೇಳಿರುವ ವರದಿಯನ್ನು ರಾಮನಗರ ಜಿಲ್ಲಾಡಳಿತವು ಕೊನೆಗೂ ಸಿದ್ಧಪಡಿಸಿದೆ.
ರಾಮನಗರ ಜಿಲ್ಲಾಧಿಕಾರಿ ಮತ್ತು ಕನಕಪುರ ತಹಶೀಲ್ದಾರ್ ನೇತೃತ್ವದಲ್ಲಿ ವರದಿ ತಯಾರಿಸಲಾಗಿದೆ. ಸುಮಾರು ಹತ್ತು ದಿನಗಳ ಕಾಲಾವಕಾಶದಲ್ಲಿ ರಾಮನಗರ ಜಿಲ್ಲಾಡಳಿತ ಈ ವರದಿಯನ್ನು ಸಿದ್ಧಪಡಿಸಿದೆ. ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಇನ್ನೆರಡು ದಿನಗಳಲ್ಲಿ ರಾಮನಗರ ಜಿಲ್ಲಾಧಿಕಾರಿಗಳು ವರದಿಯನ್ನು ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಡಿಕೆಶಿ, ಕಾಂಗ್ರೆಸ್ಸಿಗೆ ಲಾಭ ಮಾಡಿಕೊಡೋದು ಬೇಡ ಎಂದ ಯಡಿಯೂರಪ್ಪ
Advertisement
Advertisement
ವರದಿಯಲ್ಲಿ ಏನಿದೆ?
ರಾಮನಗರ ಜಿಲ್ಲಾಡಳಿತ ಸಿದ್ಧಪಡಿಸಿರುವ ಈ ವರದಿಯಲ್ಲಿ ಗೋಮಾಳ ಭೂಮಿಯಲ್ಲಿ ಯಾವುದೇ ನಿರ್ಮಾಣ, ಮಂಜೂರು, ಪರಭಾರೆ ಅಗತ್ಯ ಇಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಅರ್ಹ ಮೂಲಗಳು ಪಬ್ಲಿಕ್ ಟಿವಿಗೆ ನೀಡಿರುವ ಮಾಹಿತಿಗಳನ್ವಯ ವರದಿಯ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.
Advertisement
1. ಕಪಾಲ ಬೆಟ್ಟ ಗೋಮಾಳ ಭೂಮಿಯಾಗಿದೆ. ಇದರಲ್ಲಿ 10 ಎಕರೆ ಖಾಸಗಿ ಟ್ರಸ್ಟ್ ಗೆ ಅಕ್ರಮ ಮಂಜೂರು ಮಾಡಲಾಗಿದೆ.
2. ವನ್ಯಜೀವಿ ಕಾಯ್ದೆ, ಬಿಎಂಆರ್ ಡಿಎಗಳ ನಿಯಮಗಳನ್ನು ಉಲ್ಲಂಘಿಸಿ 10 ಎಕರೆ ಗೋಮಾಳ ಭೂಮಿ ಪರಭಾರೆ ಮಾಡಲಾಗಿದೆ.
3. ಕಪಾಲ ಬೆಟ್ಟ ನಲ್ಲಹಳ್ಳಿ ಸರ್ವೆ ನಂ.283 ರಲ್ಲಿದೆ. ಈ ಸರ್ವೆ ನಂಬರ್ ಬೆಟ್ಟದ ಪಕ್ಕದಲ್ಲೇ ಇರುವ ಕಾವೇರಿ ವನ್ಯ ಜೀವಿಧಾಮದ ಬಫರ್ ಝೋನ್ ವ್ಯಾಪ್ತಿಗೆ ಬರಲಿದೆ. ಹಾಗಾಗಿ ಯಾವುದೇ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಇದನ್ನೂ ಓದಿ: ಡಿಕೆ ಶಿವಕುಮಾರ ಅಲ್ಲ ಏಸುಕುಮಾರ – ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ
Advertisement
4. ಕಾವೇರಿ ವನ್ಯ ಜೀವಿಧಾಮದ ಬಫರ್ ಝೋನ್ ನಲ್ಲಿ ಕಾಮಗಾರಿ ನಡೆಸಲು ರಾಜ್ಯ ಮತ್ತು ಕೇಂದ್ರ ಪರಿಸರ ಇಲಾಖೆಗಳ ಅನುಮತಿ ಬೇಕು. ಈ ಅನುಮತಿಗಳು ಏಸು ಪ್ರತಿಮೆ ನಿರ್ಮಾಣಕ್ಕೆ ಪಡೆದಿರುವುದಿಲ್ಲ.
5. ಮೂರು ವರ್ಷಗಳ ಹಿಂದೆ ಬರ ಪರಿಸ್ಥಿತಿಯಿದ್ದಾಗ ಅಕ್ರಮವಾಗಿ ಕೊಳವೆ ಬಾವಿ ತೋಡಿಸಲಾಗಿತ್ತು.
6. ಅಕ್ರಮವಾಗಿ ಕೊಳವೆ ಬಾವಿ ತೋಡಲು ರಾಮನಗರ ಜಿಲ್ಲಾ ಪಂಚಾಯಿತಿಯಿಂದ ಒಪ್ಪಿಗೆ ಪಡೆಯಲಾಗಿದೆ.
7. ಏಸು ಪ್ರತಿಮೆ ನಿರ್ಮಿಸಲು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ.
8. ಪ್ರತಿಮೆ ನಿರ್ಮಿಸುವ ಸಲುವಾಗಿಯೇ ನಿಯಮ ಮೀರಿ 2 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಇದನ್ನೂ ಓದಿ: ಏಸು ಪ್ರತಿಮೆಗೆ ಜಮೀನು – ಡಿಕೆಶಿಗೆ 4 ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ
ಕಂದಾಯ ಇಲಾಖೆಗೆ ರಾಮನಗರ ಡಿಸಿ ವರದಿ ಸಲ್ಲಿಸಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಮೇಲೆ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಸಂಪುಟ ಸಭೆಯ ಚರ್ಚೆಯ ಬಳಿಕ ಸರ್ಕಾರದ ನಿರ್ಧಾರ ಗೊತ್ತಾಗಲಿದೆ. ಆದರೆ ಮೂಲಗಳ ಪ್ರಕಾರ ಏಸು ಪ್ರತಿಮೆ ನಿರ್ಮಿಸಲು ಉದ್ದೇಶಿಸಿರುವ ಗೋಮಾಳ ಭೂಮಿಯನ್ನು ಸರ್ಕಾರ ವಾಪಸ್ ಪಡೆಯುವ ಸಾಧ್ಯತೆ ದಟ್ಟವಾಗಿದೆ.