ಮಂಗಳೂರು: ಭೂ-ಕುಸಿತ ಹಾಗೂ ಭಾರೀ ಮಳೆಯಿಂದಾಗಿ ಬಂದ್ ಆಗಿದ್ದ ಶಿರಾಡಿ ಘಾಟಿ ರಸ್ತೆಯಲ್ಲಿ ಅಕ್ಟೋಬರ್ 3(ಬುಧವಾರ)ರಿಂದ ಬಸ್ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ಅನುಮತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಯವರು, ಭಾರಿ ಮಳೆಯಿಂದ ರಸ್ತೆ ಮೇಲೆ ಗುಡ್ಡ ಕುಸಿತ ಉಂಟಾಗಿದ್ದ ಕಾರಣ ಶಿರಾಡಿ ಘಾಟ್‍ನ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಸದ್ಯ ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ. ಈ ಮೊದಲು ಸೆಪ್ಟೆಂಬರ್ 5 ರಿಂದ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಅಕ್ಟೋಬರ್ 3 ರಿಂದ ಸಾರಿಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೇ ಇನ್ನೆರಡು ವಾರಗಳ ಬಳಿಕ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. ಘಾಟ್ ರಸ್ತೆಯ ಕುಸಿತ ಸ್ಥಳಗಳಲ್ಲಿ 24 ಗಂಟೆ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
Advertisement
ಇದಲ್ಲದೇ ಜಿಲ್ಲಾಡಳಿತ ಹೆದ್ದಾರಿ ಪರಿಸ್ಥಿತಿ ಅವಲೋಕಿಸಲು ತಜ್ಞರ ಮೊರೆ ಹೋಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಾದ ತಂಗವೇಲುರವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಾರೆ ಎಂದು ತಿಳಿದು ಬಂದಿದೆ. ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
Advertisement
Advertisement
ಶಿರಾಡಿ ಘಾಟ್ ಕಾಂಕ್ರೀಟ್ ಆದ ಬಳಿಕ ಕಳೆದ ಜುಲೈ 15ರಂದು ಅಧಿಕೃತ ಉದ್ಘಾಟನೆ ಆಗಿತ್ತು. ಆದರೆ ಭೂಕುಸಿತ ಕಾರಣದಿಂದಾಗಿ ಶಿರಾಡಿ ಘಾಟ್ ಹೆದ್ದಾರಿ ಸ್ಥಗಿತಗೊಳಿಸಲಾಗಿತ್ತು. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಜೊತೆಗೆ ಸಂಪಾಜೆ ಘಾಟಿಯಲ್ಲಿ ಗುಡ್ಡ ಕುಸಿತ ಸಂಭವಿದ್ದ ಪರಿಣಾಮ ರಸ್ತೆ ಸಂಪರ್ಕ ಬಂದ್ ಆಗಿತ್ತು. ಚಾರ್ಮಾಡಿ ರಸ್ತೆಯಲ್ಲಿ ವಾಹನಗಳ ದಟ್ಟನೆ ಜಾಸ್ತಿಯಾಗಿ ಭಾರೀ ಟ್ರಾಫಿಕ್ ಜಾಮ್ ಆಗುತ್ತಿರುವ ಹಿನ್ನಲೆಯಲ್ಲಿ ಲಘು ವಾಹನಗಳಿಗೆ ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ ಕೊನೆಯ ವಾರ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಿದ್ದರು. ಈ ವೇಳೆ ಗಡ್ಕರಿ ಒಂದು ವಾರದ ಒಳಗಡೆ ರಸ್ತೆಯನ್ನು ದುರಸ್ತಿ ಮಾಡಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಸೆಪ್ಟೆಂಬರ್ 5 ರಿಂದ ಹಾಸನ ಜಿಲ್ಲಾಡಳಿತ ಲಘು ವಾಹನಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv