ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣದ ಕುರಿತು ಜಿಲ್ಲಾಧಿಕಾರಿ ಜಗದೀಶ್.ಜಿ ನೇತೃತ್ವದಲ್ಲಿ ನಡೆಯುತ್ತಿರುವ ಮ್ಯಾಜಿಸ್ಟ್ರೇಟ್ ತನಿಖೆಯನ್ನ ಚುರುಕುಗೊಳಿಸಲಾಗಿದೆ. ದುರಂತ ನಡೆದಿರೋ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿರೋ ಜಿಲ್ಲಾಧಿಕಾರಿ, ಘಟನೆಯಲ್ಲಿ ಗಾಯಗೊಂಡವರಿಗೆ ನೋಟಿಸ್ (Notice) ಜಾರಿ ಮಾಡಿದ್ದಾರೆ.
ಆರ್‌ಸಿಬಿ (RCB) ವಿಜಯೋತ್ಸವದ ಅಭಿನಂದನಾ ಸಮಾರಂಭದ ವೇಳೆ ಚಿನ್ನಸ್ವಾಮಿ ಮೈದಾನದ ಬಳಿ ಕಾಲ್ತುಳಿತಕ್ಕೆ ಒಳಗಾಗಿ 11 ಮಂದಿ ಮೃತಪಟ್ಟಿದ್ದರು. ದುರಂತದಲ್ಲಿ 45 ಮಂದಿ ಗಾಯಗೊಂಡಿದ್ದರು. ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಸರ್ಕಾರ ಆದೇಶ ಮಾಡಿತ್ತು. 15 ದಿನದೊಳಗೆ ವರದಿ ಸಲ್ಲಿಸಲು ಸರ್ಕಾರದ ಸೂಚನೆ ಕೊಟ್ಟಿರುವ ಕಾರಣ ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿ ಜಗದೀಶ್ ವೇಗ ನೀಡಿದ್ದಾರೆ. ಜೂನ್ 11ರಂದು ಹಾಜರಾಗಿ ಹೇಳಿಕೆ ನೀಡುವಂತೆ ಗಾಯಾಳುಗಳಿಗೆ ಜಿಲ್ಲಾಧಿಕಾರಿ ಜಗದೀಶ್ ನೋಟಿಸ್ ಜಾರಿ ಮಾಡಿದ್ದಾರೆ. ಬೆಳಗ್ಗೆ 11 ರಿಂದ 1:30ರೊಳಗೆ ಬಂದು ಹೇಳಿಕೆ ನೀಡುವಂತೆ ಡಿಸಿ ನೋಟಿಸ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಗಾಯಾಳುಗಳಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಂಭಾಗಣದಲ್ಲಿ ಹೇಳಿಕೆ ದಾಖಲಿಸಲಾಗುವುದಾಗಿ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಸಿದ್ಧವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್
ಗಾಯಾಳುಗಳ ಹೇಳಿಕೆ ದಾಖಲಿಸಿದ ನಂತರ ಮೃತರ ಕುಟುಂಬಸ್ಥರ ಹಾಗೂ 13ನೇ ತಾರೀಕು ಸಾರ್ವಜನಿಕರು ಅಂದರೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ಪಡೆಯಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಈಗಾಲೇ ದುರಂತ ನಡೆದ ದಿನ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗಳ ಮಾಹಿತಿ ನೀಡುವಂತೆ ಪೊಲೀಸ್ ಕಮಿಷನರ್‌ಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದು, ಕೊನೆಯದಾಗಿ ಪೊಲೀಸರ ಹೇಳಿಕೆ ದಾಖಲಿಸಿ ಸರ್ಕಾರ ನೀಡಿರುವ ಅವಧಿ ಒಳಗಾಗಿ ಘಟನೆಯ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಹಾಸನ| ನೀರಿನ ತೊಟ್ಟಿಯಲ್ಲಿ ಮುಳುಗಿಸಿ 6 ವರ್ಷದ ಮಗಳನ್ನೇ ಕೊಂದ ತಾಯಿ