DistrictsKarnatakaLatestLeading NewsMain PostMysuru

ಮೈಸೂರಿನಲ್ಲಿ ಮತ್ತೆ DC Vs MLA ಫೈಟ್- ಬಗಾದಿ ವರ್ಗಾವಣೆಗೆ ರಾಮದಾಸ್ ಪಟ್ಟು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara-2022 ಉತ್ಸವ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿ ಮಧ್ಯೆ ಮುಸುಕಿನ ಗುದ್ದಾಟಕ್ಕೆ ವೇದಿಕೆಯಾಗುತ್ತಿದೆ. ಒಂದೇ ಒಂದು ಬಿಲ್ (Bill) ವಿಚಾರ ಬಿಜೆಪಿ ಶಾಸಕ ಮತ್ತು ಜಿಲ್ಲಾಧಿಕಾರಿ ನಡುವೆ ಮುನಿಸು ತಂದಿಟ್ಟಿದೆ. ಇದರಿಂದ ಜಿಲ್ಲಾ ಉಸ್ತುವಾರಿ ಮಂತ್ರಿಗೂ ತಲೆನೋವು ಶುರುವಾಗಿದ್ದು, ಶಾಸಕರ ಅಸಮಾಧಾನ ತಣಿಸುವ ಹೊಸ ಟಾಸ್ಕ್ ಹೆಗಲ ಮೇಲೇರಿದೆ.

ಕಳೆದ 8-10 ತಿಂಗಳ ಹಿಂದೆ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳ ಫೈಟ್ ನಡೆದಿತ್ತು. ಅದನ್ನು ಇಡೀ ರಾಜ್ಯ ಕುತೂಹಲದಿಂದ ನೋಡಿತ್ತು. ಈಗ ಇಡೀ ವಿಶ್ವವೇ ಮೈಸೂರಿನ ದಸರಾವನ್ನು ನೋಡುವ ಸಂದರ್ಭದಲ್ಲೇ ಮತ್ತೊಂದು ಸುತ್ತಿನ ಜನಪ್ರತಿನಿಧಿ ವರ್ಸಸ್ ಜಿಲ್ಲಾಧಿಕಾರಿ ನಡುವಿನ ಫೈಟ್ ಸದ್ದಿಲ್ಲದೆ ಶುರುವಾಗಿದೆ. ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ (Dr. Bagadi Gautham) ವರ್ಗಾವಣೆಗೆ ಮೈಸೂರಿನ ಬಿಜೆಪಿಯ ಹಿರಿಯ ಶಾಸಕ ಎಸ್.ಎ.ರಾಮದಾಸ್ (S A Ramdas) ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸೆ.26ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ

ಡಿಸಿ ಬಗಾದಿ ಗೌತಮ್ ಹಾಗೂ ಅಪರ ಜಿಲ್ಲಾಧಿಕಾರಿ ಮಂಜುನಾಥ್ ವರ್ಗಾವಣೆ ಮಾಡದೆ ಇದ್ದರೆ ತಾವು ದಸರಾದ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸುತ್ತೇನೆ. ದಸರಾಗೆ ನನ್ನ ಯಾವ ಸಹಕಾರವೂ ಇರುವುದಿಲ್ಲ ಎಂದು ರಾಮದಾಸ್ ಕೋಪಗೊಂಡಿದ್ದಾರೆ ಎನ್ನಲಾಗ್ತಿದೆ. ಆದರೆ ರಾಮದಾಸ್ ಪಟ್ಟಿಗೆ ಸರ್ಕಾರ (BJP Government) ಬಗ್ಗಿದಂತೆ ಕಾಣುತ್ತಿಲ್ಲ. ದಸರಾ ಸಂದರ್ಭದಲ್ಲಿ ಡಿಸಿ ವರ್ಗಾವಣೆ ಅಸಾಧ್ಯವಾದ ಮಾತು. ಇದರ ಮೇಲೆ ನಿಮ್ಮಿಷ್ಟ ಅಂತಾ ಸರ್ಕಾರ ರಾಮದಾಸ್‍ಗೆ ಸ್ಪಷ್ಟಪಡಿಸಿರೋ ಕಾರಣ ಶಾಸಕರು ಮತ್ತಷ್ಟು ಅಸಮಾಧಾನಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದಕ್ಕೆ ಪೂರಕವಾಗಿ ರಾಮದಾಸ್, ದಸರಾ ಪೂರ್ವಭಾವಿ ಸಿದ್ಧತೆಗಳ ಯಾವ ಸಭೆಗೂ ಹಾಜರಾಗಿಲ್ಲ. ಎಲ್ಲಾ ಜನಪ್ರತಿನಿಧಿಗಳು ಸಭೆಗೆ ಬಂದರು ಕೂಡ ಬಿಜೆಪಿಯ ಹಿರಿಯ ಶಾಸಕನ ಗೈರು ಎದ್ದು ಕಾಣುತ್ತಿದೆ.

ಡಿಸಿ ಮತ್ತು ಅಪರ ಜಿಲ್ಲಾಧಿಕಾರಿ ಮೇಲೆ ಶಾಸಕ ರಾಮದಾಸ್ ಈ ಪ್ರಮಾಣದಲ್ಲಿ ರೊಚ್ಚಿಗೆದ್ದಿರೋದಕ್ಕೆ ಕಾರಣ ಒಂದು ಬಿಲ್. ಮೈಸೂರಿನಲ್ಲಿ ವಿಶ್ವ ಯೋಗ ದಿನಾಚರಣೆಗೂ ಒಂದು ತಿಂಗಳ ಮುನ್ನ ನಾಲ್ಕು ಭಾನುವಾರವೂ ಯೋಗ ತಾಲೀಮು ನಡೆದಿತ್ತು. ಇದರ ನೇತೃತ್ವ ವಹಿಸಿದ್ದ ಶಾಸಕ ರಾಮದಾಸ್, ನಂತರ ತಾಲೀಮಿನ ಬಿಲ್ ಮಂಜೂರು ಮಾಡುವಂತೆ ಡಿಸಿಗೆ ಹೇಳಿದ್ದಾರೆ. ಆದರೆ ಡಿಸಿ ಬಗಾದಿ ಗೌತಮ್ ಜಿಲ್ಲಾಡಳಿತದ ಪೂರ್ವಾನುಮತಿ ಇಲ್ಲದೆ ಮಾಡಿರೋ ತಾಲೀಮಿನ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ. ಕಾನೂನಾತ್ಮಕವಾಗಿ ನಾನು ಬಿಲ್ ಹಣ ಮಂಜೂರು ಅಸಾಧ್ಯ ಎಂದು ರಾಮದಾಸ್ ಆಜ್ಞೆಯನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರಂತೆ. ಇದನ್ನೂ ಓದಿ: ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿಗಳಿಗೆ ಅಧಿಕೃತ ಆಹ್ವಾನ

ಆದರೆ ರಾಮದಾಸ್ ಈ ಬಿಲ್‍ಗಾಗಿ ಹಿರಿಯರಿಂದ ಹೇಳಿಸಿದರೂ ಡಿಸಿ ಮಾತ್ರ ಬಿಲ್ ಮಂಜೂರಾತಿಗೆ ಒಪ್ಪಿಲ್ಲ. ಇದರಿಂದ ರಾಮದಾಸ್ ಅಸಮಾಧಾನಗೊಂಡು, ಒಬ್ಬ ಹಿರಿಯ ಶಾಸಕರ ಮಾತಿಗೆ ಬೆಲೆ ಇಲ್ವಾ ಎಂದು ಪ್ರಶ್ನಿಸಿ ಡಿಸಿ ವರ್ಗಾವಣೆಗೆ ಪಟ್ಟು ಹಿಡಿದಿದ್ದು, ದಸರಾಗೆ ತಮ್ಮ ಅಸಹಕಾರ ಮುಂದುವರಿಸಿದ್ದಾರೆ ಎನ್ನಲಾಗ್ತಿದೆ. ಆದರೆ ರಾಮದಾಸ್ ಮನವೊಲಿಸುವ ಟಾಸ್ಕ್ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೆಗಲೇರಿದ್ದು, ಅತ್ತ ದಸರಾ ಸಿದ್ಧತೆಯನ್ನೇ ನೋಡೋದಾ ಇಲ್ಲ ಸ್ವಪಕ್ಷಿಯ ಶಾಸಕನ ಅಸಮಾಧಾನ ತಣಿಸೋದ ಎನ್ನೋ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ.

Live Tv

Leave a Reply

Your email address will not be published.

Back to top button