ದಾವಣಗೆರೆ: ಮಾಯಕೊಂಡ ತಾಲೂಕು ಕೇಂದ್ರವನ್ನಾಗಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಆನಗೋಡು ಹೋಬಳಿಯನ್ನು ಮಾಯಕೊಂಡ ತಾಲೂಕಿಗೆ ಸೇರಿಸಿದರೆ 1992 ಗೋಲಿಬಾರ್ ಮರುಕಳಿಸುತ್ತದೆ ಎಂದು ಜಿಲ್ಲಾಧಿಕಾರಿಗಳ ಮುಂದೆಯೇ ರೈತ ಮುಖಂಡ ಚಿನ್ನಸಮುದ್ರದ ಶೇಖರ್ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಯಕೊಂಡ ಪ್ರತ್ಯೇಕ ತಾಲೂಕು ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಭೆ ನಡೆದಿತ್ತು. ಜಿಲ್ಲಾಧಿಕಾರಿ ಸಭೆಯ ನೇತೃತ್ವ ವಹಿಸಿದ್ದರು. ಮಾಯಕೊಂಡ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಶೇಖರ್ ನಾಯ್ಕ್, ಮಾಯಕೊಂಡ ಕ್ಷೇತ್ರವನ್ನು ತಾಲೂಕು ಮಾಡಲು ನಮ್ಮ ವಿರೋಧವಿಲ್ಲ. ಆದರೆ ಮಾಯಕೊಂಡ ತಾಲೂಕಿಗೆ ಆನಗೋಡು ಹೋಬಳಿಯನ್ನು ಸೇರ್ಪಡೆ ಮಾಡಿದರೆ 1992ರಲ್ಲಿ ನಡೆದ ಗೋಲಿಬಾರ್ ಮತ್ತೆ ಮರುಕಳಿಸುತ್ತದೆ ಎಂದು ವೇದಿಕೆ ಮೇಲೆಯೇ ಎಚ್ಚರಿಕೆ ನೀಡಿದರು.
Advertisement
Advertisement
ಜಿಲ್ಲಾಧಿಕಾರಿಗಳ ಮುಂದೆಯೇ ಈ ರೀತಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಇತರ ಗ್ರಾಮಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಅವರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದರು. ಹೀಗಾಗಿ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಶೇಖರ್ ನಾಯ್ಕ್ ವಿರುದ್ಧ ಜನರು ಮುಗಿಬಿದ್ದರು. ಆಗ ಪೊಲೀಸರು ಶೇಖರ್ ನಾಯ್ಕ್ ಅವರನ್ನು ಸಭೆಯಿಂದ ಹೊರಗೆ ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅಲ್ಲದೆ ಸಭೆಯಲ್ಲಿ ಗೊಂದಲ ಸೃಷ್ಟಿಯಾದ ಹಿನ್ನಲೆ ಜಿಲ್ಲಾಧಿಕಾರಿಗಳೇ ಸಭೆಯಿಂದ ಹೊರ ನಡೆದರು.