ಥಾಣೆ: ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಕೌಟುಂಬಿಕ ಕಲಹಗಳಿಂದ ಖಿನ್ನತೆಗೆ ಒಳಗಾಗಿದ್ದಾನೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.
ದಾವೂದ್ ಉತ್ತರಾಧಿಕಾರಿ ಎಂದೇ ಕರೆಸಿಕೊಂಡಿದ್ದ, ಆತನ ಮಗ ಮೋಯಿನ್ ನವಾಜ್ ಡಿ ಕಸ್ಕರ್ (31) ಮೌಲ್ವಿ ಯಾಗಲು ನಿರ್ಧಾರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
Advertisement
ಕಾನೂನು ಬಾಹಿರ ಕೃತ್ಯಗಳಿಂದ ಬೇಸತ್ತು ಹೋಗಿರುವ ಮೋಯಿನ್, ಕುಟುಂಬ ವ್ಯವಹಾರಗಳನ್ನು ಮುಂದುವರೆಸದೇ ಇರಲು ನಿರ್ಧರಿಸಿದ್ದು, ತಂದೆಯ ಕೃತ್ಯಗಳಿಂದ ಇಡೀ ಕುಟುಂಬಕ್ಕೆ ಕಳಂಕ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾನೆ ಎನ್ನಲಾಗಿದೆ.
Advertisement
Advertisement
ಅಪಾರ ಸಂಪತ್ತು, ತೋಳ್ಬಲ ಹೊಂದಿದ್ದರೂ, ದಾವೂದ್ ತನ್ನ ಕುಟುಂಬದ ಸಮಸ್ಯೆಗಳನ್ನು ನಿವಾರಿಸಲು ವಿಫಲನಾಗಿದ್ದಾನೆ. ದಾವೂದ್ ನ ಮೂರು ಮಕ್ಕಳಲ್ಲಿ ಮೋಯಿನ್ ಒಬ್ಬನೇ ಗಂಡು ಮಗನಾಗಿದ್ದು, ಧರ್ಮ ನಿಷ್ಠನಾಗಿರುವ ಮೋಯಿನ್ ಮೌಲ್ವಿ (ಧಾರ್ಮಿಕ ಶಿಕ್ಷಕ) ಯಾಗಲು ನಿರ್ಧರಿಸಿದ್ದಾನೆ ಎಂದು ಥಾಣೆ ಪೋಲಿಸ್ ಅಧಿಕಾರಿ ಪ್ರದೀಪ್ ಶರ್ಮಾ ಹೇಳಿದ್ದಾರೆ.
Advertisement
ಕಳೆದ ಸೆಪ್ಟೆಂಬರ್‍ನಲ್ಲಿ ಥಾಣೆಯ ಎಇಸಿಗೆ ಸಿಕ್ಕಿಬಿದ್ದ ದಾವೂದ್ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ವಿಚಾರಣೆ ವೇಳೆ ಈ ವಿಷಯ ಬಹಿರಂಗಗೊಂಡಿದ್ದು, ಇನ್ನು ಕೆಲವು ಕೌಟುಂಬಿಕ ಭಿನ್ನತೆಗಳು ಹಾಗೂ ವಯೋಸಹಜ ಅನಾರೋಗ್ಯಗಿಂದ ದಾವೂದ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದ.
ಇನ್ನು ಮೋಯಿನ್ ಖುರಾನ್ ನ 6,236 ಶ್ಲೋಕಗಳನ್ನು ಕಂಠಪಾಠ ಮಾಡಿದ್ದು, ಧಾರ್ಮಿಕ ಮುಖಂಡರಿಂದ ಅಪಾರ ಗೌರವ ಗಳಿಸಿದ್ದಾನೆ. ಅಲ್ಲದೇ ಈಗಾಗಲೇ ಶ್ರೀಮಂತ ಜೀವನ ತ್ಯಜಿಸಿರುವ ಮೋಯಿನ್ ಕರಾಚಿಯಲ್ಲಿ ನೀಡಲಾಗಿದ್ದ ಭವ್ಯ ಬಂಗಲೆ ಹಾಗೂ ಐಶಾರಾಮಿ ಸೌಕರ್ಯಗಳನ್ನು ತಿರಸ್ಕರಿಸಿ, ತನ್ನ ಕುಟುಂಬದೊಂದಿಗೆ ತಮ್ಮ ಮನೆಯ ಪಕ್ಕದ ಮಸೀದಿಯೊಂದರಲ್ಲಿ ಜೀವನ ನಡೆಸಲು ಮುಂದಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮೋಯಿನ್ ಪತ್ನಿ ಹಾಗೂ ಆತನ ಮೂರು ಮಕ್ಕಳು ಪ್ರಸ್ತುತ ಆತನೊಂದಿಗೆ ಮಸೀದಿ ನೀಡಿರುವ ಸಣ್ಣ ಕ್ವಾಟ್ರಸ್ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೋಯಿನ್ 2011ರಲ್ಲಿ ಪಾಕಿಸ್ತಾನ ಮತ್ತು ಬ್ರಿಟನ್‍ನಲ್ಲಿ ವ್ಯವಹಾರ ಹೊಂದಿರುವ ಉದ್ಯಮಿ ಪುತ್ರಿಯನ್ನು ಮದುವೆಯಾಗಿದ್ದಾನೆ. ಅಲ್ಲದೇ ಮೋಯಿನ್ ಸಹೋದರಿ ಮಹ್ರುಕ್ 2006 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದದ್ ಪುತ್ರನನ್ನು ಮದುವೆಯಾಗಿದ್ದಾಳೆ. ಮತ್ತೊಬ್ಬ ದಾವೂದ್ ಪುತ್ರಿ ಮಹ್ರೀನ್, ಅಮೆರಿಕದ ಮೂಲದ ಉದ್ಯಮಿಯನ್ನು ವರಿಸಿದ್ದಾಳೆ.
ಈ ಹಿಂದೆ ಪೊಲೀಸ್ ವಿಚಾರಣೆ ವೇಳೆ ಇಬ್ರಾಹಿಂ ಕಸ್ಕರ್, ದಾವೂದ್ ಆರೋಗ್ಯವಾಗಿದ್ದು, ಪಾಕಿಸ್ತಾನಿ ಏಜೆನ್ಸಿಗಳ ರಕ್ಷಣೆಯಲ್ಲಿ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದ. ಆದರೆ ದಾವೂದ್ ಸಹೋದರರ ಪೈಕಿ ಕೆಲವರು ಮೃತಪಟ್ಟಿದ್ದು, ಮತ್ತೊಬ್ಬ ಸಹೋದರ ಅನೀಸ್ ಇಬ್ರಾಹಿಂ ಕಸ್ಕರ್ ಗೆ ವಯಸ್ಸಾಗಿದೆ. ಇನ್ನು ದಾವೂದ್ ತನ್ನ ವ್ಯವಹಾರಗಳನ್ನು ನೋಡಿಕೊಳ್ಳಲು ಹತ್ತಿರದ ಸಂಬಂಧಿಗಳ ಬಗ್ಗೆ ವಿಶ್ವಾಸ ಹೊಂದಿಲ್ಲ ಎಂದು ತಿಳಿದುಬಂದಿದೆ.
ಇಬ್ರಾಹಿಂ ಕಸ್ಕರ್ ವಿಚಾರಣೆಯನ್ನು ಮುಂದುವರೆಸಿರುವ ಪೊಲೀಸರು, ಮುಂಬರುವ ದಿನಗಳಲ್ಲಿ ದಾವೂದ್ ಕುಟುಂಬ ಹಾಗೂ ಆತನ ಭವಿಷ್ಯದ ಚಟುವಟಿಕೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದಾರೆ.