ದಾವೊಸ್ (ಸ್ವಿಟ್ಜರ್ಲೆಂಡ್): ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದ ಮೂರನೇ ದಿನವಾದ ಇಂದು ಕರ್ನಾಟಕದ ಪಾಲಿಗೆ ಫಲಪ್ರದವಾಗಿ ಪರಿಣಮಿಸಿತು. ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಅವರು ಪ್ರತಿಷ್ಠಿತ ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ಇದರಲ್ಲಿ ದಸ್ಸಾ ಸಿಸ್ಟಮ್ಸ್, ಅರ್ಸೆಲಾರ್ ಮಿತ್ತಲ್, ಭಾರತ್ ಫೋರ್ಜ್, ಲಾಕ್ ಹೀಡ್ ಮಾರ್ಟಿನ್, ಲುಲು ಗ್ರೂಪ್ ಮತ್ತು ನೊವೊ ನಾರ್ಡಿಸ್ಕ್ ಮೊದಲಾದ ಕಂಪೆನಿಗಳು ಸೇರಿದ್ದವು.
ತಮ್ಮನ್ನು ಭೇಟಿಯಾದ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದ ಸಿಎಂ ಯಡಿಯೂರಪ್ಪ ಅವರು, ಕರ್ನಾಟಕ ಸರ್ಕಾರವು ಹೂಡಿಕೆದಾರರಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಿದೆ. ಜೊತೆಗೆ ಎಲ್ಲ ರೀತಿಯ ಅಡಚಣೆಗಳನ್ನು ನಿವಾರಿಸಲಿದೆ ಎಂದು ಸ್ಪಷ್ಟ ಪಡಿಸಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಹೂಡಿಕೆಗೆ ಸೂಕ್ತ ನೆರವು ಒದಗಿಸಲಿದ್ದಾರೆ ಎಂದು ತಿಳಿಸಿದರು.
Advertisement
Advertisement
ಈಗಾಗಲೇ ಬೆಂಗಳೂರಿನಲ್ಲಿ ಅಸ್ತಿತ್ವ ಹೊಂದಿರುವ ದಸ್ಸಾ ಸಿಸ್ಟಮ್ಸ್ 3ಡಿಎಸ್ ಅವರಿಂದ ಹೂಡಿಕೆಯ ಕುರಿತು ಅತ್ಯಂತ ಭರವಸೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಕಂಪೆನಿಯ ಉಪಾಧ್ಯಕ್ಷ ಫ್ಲಾರೆನ್ಸ್ ವರ್ಝೆಲೆನ್ ಅವರು ಬೆಂಗಳೂರು ಹಾಗೂ ಯಾವುದಾದರೂ ಜಿಲ್ಲೆಯಲ್ಲಿ ಎರಡು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ವಹಿಸುವುದಾಗಿ ತಿಳಿಸಿದರು. `ನಾವು ಪ್ರತಿ ಕೇಂದ್ರದಲ್ಲಿ ಪ್ರತಿ ವರ್ಷ ತಲಾ 2,000 ಯುವಕರಿಗೆ ತರಬೇತಿ ನೀಡಿ, ದೊಡ್ಡ ಕಂಪೆನಿಗಳಲ್ಲಿ ಕೌಶಲ್ಯಪೂರ್ಣ ಉದ್ಯೋಗ ಪಡೆಯಲು ಅರ್ಹರನ್ನಾಗಿಸಲಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಯುವಕರಿಗೆ ತರಬೇತಿ ನೀಡಲು ತಾವು ಆಸಕ್ತರಾಗಿದ್ದೇವೆ’ ತಿಳಿಸಿದರು.
Advertisement
ಎಂಜಿನಿಯರಿಂಗ್ ಪದವೀಧರರಿಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದ ಫ್ಲಾರೆನ್ಸ್ ವರ್ಝೆಲೆನ್ ಅವರು, ಈ ಕೇಂದ್ರಗಳ ಸ್ಥಾಪನೆಗೆ ಒಂದು ದಶಲಕ್ಷ ಯುರೋ ಹೂಡಿಕೆ ಮಾಡಲಾಗುವುದು ಎಂದರು. ಬೆಂಗಳೂರು ರಕ್ಷಣಾ ಉಪಕರಣಗಳು ಹಾಗೂ ಎರೋಸ್ಪೇಸ್ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಈ ವಲಯಗಳಲ್ಲಿ ತರಬೇತಿ ಹೊಂದಿದ ಯುವಕರಿಗೆ ಬೇಡಿಕೆ ಇರುವ ಕುರಿತು ಸಿಎಂ ಗಮನ ಸೆಳೆದಾಗ ವರ್ಝೇಲೆನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಅಂತಹ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
Advertisement
ಉಕ್ಕಿನ ಕೈಗಾರಿಕೆಗಳ ಪ್ರಮುಖ ಉದ್ಯಮಿ ಲಕ್ಷ್ಮಿ ಎನ್.ಮಿತ್ತಲ್ ಮಂಗಳವಾರ ರಾತ್ರಿ ನಡೆದ ಸಿಐಐ ಭೋಜನ ಕೂಟದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದರು. ಇಂದು ಬೆಳಗ್ಗೆಯೂ ಕರ್ನಾಟಕ ಪೆವಿಲಿಯನ್‍ಗೆ ಆಗಮಿಸಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಚರ್ಚೆ ನಡೆಸಿದರು. ಅವರ ಕಂಪೆನಿಯು ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 3,000 ಎಕರೆ ಭೂಮಿ ಹೊಂದಿದೆ.
`2010ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಉಕ್ಕು ತಯಾರಿಕಾ ಘಟಕ ಸ್ಥಾಪನೆಗೆ ಅನುಮತಿ ನೀಡಿದ್ದು, ಕಾರಣಾಂತರಗಳಿಂದ ಇದಕ್ಕೆ ಅಡಚಣೆಗಳು ಉಂಟಾಗಿವೆ. ಈಗ ತಾವು ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿ ಎಂದು ಲಕ್ಷ್ಮಿ ಎನ್.ಮಿತ್ತಲ್ ಮನವಿ ಮಾಡಿದರು. ಕರ್ನಾಟಕದಲ್ಲಿ ಸೌರ ವಿದ್ಯುತ್ ಸ್ಥಾವರದಲ್ಲಿ ಹೂಡಿಕೆ ಮಾಡುವುದಾಗಿ ಮಿತ್ತಲ್ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಉಕ್ಕು ತಯಾರಿಕಾ ಘಟಕ ಹಾಗೂ ಸೌರ ವಿದ್ಯುತ್ ಸ್ಥಾವರಗಳೆರಡರ ಯೋಜನೆಯನ್ನೂ ಕೂಡಲೇ ಪ್ರಾರಂಭಿಸುವಂತೆ ಸಲಹೆ ನೀಡಿದರು. ಅದಕ್ಕೆ ಮಿತ್ತಲ್ ಅವರು ಈ ಕೂಡಲೇ ಉಕ್ಕಿನ ಉಪಯೋಗದ ಕುರಿತ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿ ಅವರು ಕರ್ನಾಟಕದಲ್ಲಿ ಸರಕು ಸಾಗಾಣಿಕೆ ವಲಯದಲ್ಲಿ 2000 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದರು. ಈ ಸಂಸ್ಥೆಯು ವಿಶೇಷವಾಗಿ ಕೃಷಿ ಉತ್ಪನ್ನ ಹಾಗೂ ಶೀಘ್ರ ಕೊಳೆತುಹೋಗುವ ತರಕಾರಿ, ಆಹಾರ ವಸ್ತುಗಳು, ಹಣ್ಣು ಹಂಪಲು ಹಾಗೂ ಪುಷ್ಪಗಳ ಸಾಗಾಣಿಕೆಗೇ ಹೂಡಿಕೆ ಮಾಡಲಿದೆ.
ಕೈಗಾರಿಕಾ ಸಚಿವ ಜಗದೀಶ್ ಎಸ್. ಶೆಟ್ಟರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರೂ ಸಹ ಸಭೆಗಳಲ್ಲಿ ಭಾಗವಹಿಸಿದ್ದರು.