Connect with us

Cricket

ಯುವಿ ಸಿಕ್ಸರ್ ದಾಖಲೆ ಮುರಿಯದಿದ್ರೂ ‘ಸೊನ್ನೆ’ ಸುತ್ತಬೇಕಾದವ 35 ಎಸೆತದಲ್ಲಿ ಸೆಂಚುರಿ ಬಾರಿಸಿದ!

Published

on

– ಮೊದಲ 14 ಎಸೆತಗಳಲ್ಲಿ 18 ರನ್, ನಂತರದ 21 ಎಸೆತದಲ್ಲಿ 82 ರನ್

ಪೊಚೆಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಬ್ಯಾಟಿಂಗ್ ಗೆ ಬಂದಿದ್ದು 10ನೇ ಓವರ್. ಎದುರಿಸಿದ 2ನೇ ಎಸೆತದಲ್ಲಿ ಕೈಚೆಲ್ಲಿದ ಕ್ಯಾಚ್, ಆರಂಭದ 14 ಎಸೆತಗಳಲ್ಲಿ 18 ರನ್, ನಂತರದ 21 ಎಸೆತಗಳಲ್ಲಿ 82 ರನ್, ಒಂದೇ ಓವರ್ ನಲ್ಲಿ 5 ಸಿಕ್ಸರ್, ಸ್ವಲ್ಪದರಲ್ಲೇ ತಪ್ಪಿದ ಯುವರಾಜ್ ಸಿಂಗ್ ದಾಖಲೆಯನ್ನು ಸರಿಗಟ್ಟುವ ಅವಕಾಶ. ಕೇವಲ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಕೀರ್ತಿ ಡೇವಿಡ್ ಮಿಲ್ಲರ್ ಪಾಲಾಯ್ತು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಗೌರವವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು. ಹೌದು, ದಕ್ಷಿಣ ಆಫ್ರಿಕಾ ತಂಡದ ಆಟಗಾರ ಡೇವಿಡ್ ಮಿಲ್ಲರ್ ಬಾಂಗ್ಲಾ ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

2ನೇ ಬಾಲಲ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು!: ತನಗೆ ಬಾಂಗ್ಲಾ ವಿಕೆಟ್ ಕೀಪರ್ ನೀಡಿದ ಜೀವದಾನವನ್ನು ವರದಾನವಾಗಿ ಪರಿಗಣಿಸಿದ ಡೇವಿಡ್ ಮಿಲ್ಲರ್ ಆರಂಭದಲ್ಲಿ ಮುಗ್ಗರಿಸುತ್ತಲೇ ಬ್ಯಾಟಿಂಗ್ ಮಾಡಿದರು. 10ನೇ ಓವರ್ ನ ಕೊನೆಯ ಎಸೆತದಲ್ಲಿ ಬ್ಯಾಟಿಂಗ್ ಗೆ ಕ್ರೀಸ್ ಗೆ ಆಗಮಿಸಿದ್ದ ಮಿಲ್ಲರ್ ಯಾವುದೇ ರನ್ ಗಳಿಸಲಿಲ್ಲ.

ಓವರ್ ಮುಗಿದ ಹಿನ್ನೆಲೆಯಲ್ಲಿ ಹಶೀಂ ಆಮ್ಲ ಸ್ಟ್ರೈಕ್ ಗೆ ಬಂದರು. 11ನೇ ಓವರ್ ನ ಮೊದಲ ಎಸೆತದಲ್ಲಿ ಹಶೀಂ ಆಮ್ಲ 1 ರನ್ ಗಳಿಸಿ ಮಿಲ್ಲರ್ ಗೆ ಸ್ಟ್ರೈಕ್ ನೀಡಿದರು. ಈ ಓವರ್ ಎಸೆಯುತ್ತಿದ್ದ ರೂಬೆಲ್ ಹುಸೈನ್ ನಂತರದ ಎಸೆತವನ್ನು ಶಾರ್ಟ್ ಬಾಲ್ ಮಾಡಿದರು. ಈ ವೇಳೆ ಬಾಲ್ ಮಿಲ್ಲರ್ ಗ್ಲೌಸ್ ಸವರಿಕೊಂಡು ವಿಕೆಟ್ ಕೀಪರ್ ಬಳಿಗೆ ಹೋಯಿತು. ವಿಕೆಟ್ ಕೀಪರ್ ಗ್ಲೌಸ್ ಗೆ ಕ್ಯಾಚ್ ಹೋದರೂ ಬ್ಯಾಲೆನ್ಸ್ ತಪ್ಪಿದ ಕಾರಣ ಮುಷ್ಫಿಕುರ್ ಕ್ಯಾಚ್ ಕೈ ಚೆಲ್ಲಿದರು. ನಂತರ ಹಲವಾರು ಎಸೆತಗಳಲ್ಲಿ ಮಿಲ್ಲರ್ ಮುಗ್ಗರಿಸಿದರು.

ಆರಂಭದಲ್ಲಿ ನನಗೆ ಬ್ಯಾಟ್ ಮಾಡುವಾಗ ಸಮಸ್ಯೆ ಎದುರಾಯಿತು. ಆರಂಭದ 10 ಬಾಲ್ ನಲ್ಲಿ ನಾನು 2 ಬಾರಿ ಔಟಾಗಬೇಕಿತ್ತು. ಆದರೆ ನಾನು ಬಚಾವಾದೆ. ಆದರೆ ಕೊನೆಯಲ್ಲಿ ನನ್ನ ಬ್ಯಾಟಿಂಗ್ ನನಗೆ ತೃಪ್ತಿ ಹಾಗೂ ಸಂತೋಷ ತಂದು ಕೊಟ್ಟಿದೆ ಎಂದು ಹೇಳಿದರು. ಒಟ್ಟು 36 ಎಸೆತಗಳನ್ನು ಎದುರಿಸಿದ ಡೇವಿಡ್ ಮಿಲ್ಲರ್ 9 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಜೇಯರಾಗಿ ಉಳಿದರು.

ಯುವಿ ದಾಖಲೆ ಸರಿಗಟ್ಟಿದವರಿಲ್ಲ!: ಇನ್ನಿಂಗ್ಸ್‍ನ 19ನೇ ಓವರ್ ನ ಆರಂಭದ 5 ಎಸೆತಗಳನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ಬಾರಿಸಿದ್ದರು. ಕೊನೆಯ ಎಸೆತವನ್ನೂ ಅವರು ಸಿಕ್ಸರ್ ಬಾರಿಸುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಮೂಲಕ ಯುವರಾಜ್ ಸಿಂಗ್ ಒಂದೇ ಓವರ್ ಗೆ ಬಾರಿಸಿದ 6 ಸಿಕ್ಸರ್ ಗಳ ದಾಖಲೆಯನ್ನು ಮಿಲ್ಲರ್ ಸರಿಗಟ್ಟುವ ಅವಕಾಶವೂ ಇತ್ತು. ಆದರೆ ಕೊನೆಯ ಎಸೆತದಲ್ಲಿ ಕೇವಲ 1 ರನ್ ಮಾತ್ರ ಗಳಿಸುವುದು ಸಾಧ್ಯವಾಯ್ತು.

ಮಿಲ್ಲರ್ ಆಮ್ಲ ಜೊತೆಯಾಟ: ಮಿಲ್ಲರ್ ಹಾಗೂ ಹಶೀಂ ಆಮ್ಲ ಜೋಡಿ ನಾಲ್ಕನೇ ವಿಕೆಟ್‍ಗೆ ಕೇವಲ 41 ಎಸೆತಗಳ ನೆರವಿನಿಂದ 79 ರನ್‍ಗಳ ಜೊತೆ ಆಟವನ್ನು ನೀಡಿದರು. ಆಮ್ಲ ಈ ಪಂದ್ಯದಲ್ಲಿ 51 ಎಸೆತಗಳಲ್ಲಿ 85 ಗಳಿಸಿ ಮಿಲ್ಲರ್‍ಗೆ ಉತ್ತಮ ಜೊತೆ ಆಟವನ್ನು ನೀಡಿದರು. 85 ರನ್ ಗಳ ಈ ಇನ್ನಿಂಗ್ಸ್ ನಲ್ಲಿ 1 ಸಿಕ್ಸರ್ ಹಾಗೂ 11 ಬೌಂಡರಿಗಳಿದ್ದವು.

ಈ ಹಿಂದಿನ ಸೆಂಚುರಿ ದಾಖಲೆ!: ಈ ಹಿಂದೆ ಟಿ20 ಮಾದರಿಯಲ್ಲಿ ಅತ್ಯಂತ ವೇಗದ ಶತಕವನ್ನು ಸಿಡಿಸಿದ ದಾಖಲೆಯನ್ನು ದಕ್ಷಿಣ ಆಫ್ರಿಕಾದ ರಿಚರ್ಡ್ ಲೆವಿ ಹೊಂದಿದ್ದರು. ರಿಚರ್ಡ್ ಲೆವಿ 2012ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್ ಸ್ಫೋಟಕ ಶತಕದಿಂದ ನಿಗದಿತ 20 ಓವರ್ ಗಳಲ್ಲಿ 224 ರನ್‍ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ದಕ್ಷಿಣ ಆಫ್ರಿಕಾ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾ 141 ರನ್‍ಗಳಿಗೆ ಆಲೌಟಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ 83 ರನ್‍ಗಳ ಗೆಲುವು ಸಾಧಿಸಿತು.

ಟಿ20ಯಲ್ಲಿ ದಾಖಲಾಗಿರುವ ಅತ್ಯಂತ ವೇಗದ ಟಾಪ್ 5 ಶತಕಗಳ ವಿವರ ಇಂತಿದೆ. ಡೇವಿಡ್ ಮಿಲ್ಲರ್- 101, 35 ಎಸೆತ, ರಿಚರ್ಡ್ ಲೆವಿ – 117, 45 ಎಸೆತ, ಪ್ಲಾಪ್ ಡೂಪ್ಲೆಸಿಸ್ – 119, 46 ಎಸೆತ, ಕರ್ನಾಟಕದ ಲೋಕೇಶ್ ರಾಹುಲ್ – 110, 46 ಎಸೆತ, ಕ್ರಿಸ್ ಗೇಲ್ – 100, 47 ಎಸೆತ ಹಾಗೂ ಅರೋನ್ ಫಿಂಚ್ – 156, 47 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ.

ಐಪಿಎಲ್‍ನಲ್ಲಿ ದಾಖಲೆ: 2013ರಲ್ಲಿ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಕೇವಲ 30 ಎಸೆತಗಳಲ್ಲಿ ಶತಕವನ್ನು ಪೂರೈಸಿದ್ದರು. ಅಲ್ಲದೇ 2004 ರಲ್ಲಿ ಆಂಡ್ರೂ ಸೈಮಂಡ್ಸ್ 34 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು.

Click to comment

Leave a Reply

Your email address will not be published. Required fields are marked *