Connect with us

Latest

ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ ನಿರ್ಮಿಸಬೇಡಿ, ನಾನು ಮೃತಪಟ್ಟ ಬಳಿಕ ಸಸಿಗಳನ್ನು ನೆಡಿ: ಅನಿಲ್ ಮಾಧವ್ ದವೆ ವಿಲ್

Published

on

ನವದೆಹಲಿ: “ನಾನು ಮೃತಪಟ್ಟ ಬಳಿಕ ಸಸಿಗಳನ್ನು ನೆಡಿ, ನದಿಗಳನ್ನು ರಕ್ಷಿಸಿ ಆದರೆ ಎಲ್ಲಿಯೂ ನನ್ನ ಹೆಸರನ್ನು ಬಳಸಬೇಡಿ”

ಇದು ಇಂದು ನಿಧನರಾದ  ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಅನಿಲ್ ಮಾಧವ್ ದವೆ ಅವರ ಬರೆದಿದ್ದ ವಿಲ್ ನಲ್ಲಿರುವ ಸಾಲುಗಳು.

ಈ ವಿಲ್ ಇತ್ತೀಚಿಗೆ ಬರೆದಿದ್ದು ಅಲ್ಲ. ಇದು ದವೆ ಅವರು 2012ರಲ್ಲಿ ಬರೆದಿದ್ದ ವಿಲ್. ಈ ವಿಲ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರ ಸ್ನೇಹಿತ ಮಧ್ಯಪ್ರದೇಶ ಬಿಜೆಪಿಯ ಉಪಾಧ್ಯಕ್ಷ ವಿಜೇಶ್ ಲುನಾತ್, ದವೆ ಅವರು 2012ರ ಡಿಸೆಂಬರ್ ನಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು. ಈ ವೇಳೆ ಈ ವಿಲ್ ಅನ್ನು ಬರೆದು ಸಹಿ ಹಾಕಿದ್ದರು ಎಂದು ತಿಳಿಸಿದ್ದಾರೆ.

ತನ್ನ ಅಂತ್ಯಸಂಸ್ಕಾರವನ್ನು ಮಧ್ಯಪ್ರದೇಶದ ಹೊಸಂಗದಬಾದ್ ಜಿಲ್ಲೆಯ ನರ್ಮದಾ ನದಿಯ ದಂಡೆಯಲ್ಲಿರುವ ಭಂದ್ರಾಭನ್‍ದಲ್ಲಿ ನಡೆಯಬೇಕೆಂದು ಎಂದು ಅನಿಲ್ ಮಾಧವ್ ಹೇಳಿಕೊಂಡಿದ್ದರು.

ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ, ಸ್ಪರ್ಧೆ, ಪ್ರತಿಮೆಗಳನ್ನು ನಿರ್ಮಿಸಬೇಡಿ. ನನ್ನ ಬಗ್ಗೆ ಯಾರದ್ರೂ ಏನಾದರೂ ಮಾಡಬೇಕು ಎಂದಿದ್ದರೆ ಸಸಿಗಳನ್ನು ನೆಡಿ, ನದಿಯನ್ನು ರಕ್ಷಿಸಿ. ಅದು ನನಗೆ ಸಂತೋಷವನ್ನು ನೀಡುತ್ತದೆ ಎಂದು ಹಿಂದಿಯಲ್ಲಿ ದವೆ ವಿಲ್ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಲ್ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

61 ವರ್ಷದ ಅನಿಲ್ ಮಾಧವ್ ದವೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತವಾಗಿ, ಇಂದು ಮೃತಪಟ್ಟಿದ್ದಾರೆ.

2009ರಿಂದ ರಾಜ್ಯಸಭಾ ಸದಸ್ಯರಾಗಿರುವ ಇವರು 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಸಚಿವರ ಅಕಾಲಿಕ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಚಿವರ ಅಕಾಲಿಕ ನಿಧನ ನಿಜಕ್ಕೂ ಆಘಾತ ತಂದಿದೆ. ದೇವರು ಅವರ ಕುಟುಂಬಸ್ಥರಿಗೆ ದುಃಖ ಭರಿಸೋ ಶಕ್ತಿ ನೀಡಲಿ ಅಂತಾ ರಾಷ್ಟ್ರಪತಿಯವರು ಸಂತಾಪ ಸೂಚಿಸಿದ್ದಾರೆ.

`ಗೌರವಾನ್ವಿತ ಸಹೋದ್ಯೋಗಿ, ಸ್ನೇಹಿತ, ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರ ನಿಧನದಿಂದ ಆಘಾತವಾಗಿದೆ. ಸಂತಾಪಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

`ದವೆ ಅವರೊಬ್ಬ ಉತ್ತಮ ಸಾರ್ವಜನಿಕ ಸೇವಕ. ಪರಿಸರ ರಕ್ಷಣೆಯ ಬಗ್ಗೆ ಅವರಿಗೆ ಅತೀವ ಕಾಳಜಿ ಇತ್ತು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

`ನಿನ್ನೆ ಸಂಜೆಯಷ್ಟೇ ಅವರ ಬಳಿ ಪ್ರಮುಖ ವಿಷಯಗಳ ಬಗ್ಗೆ ಅವರ ಜತೆ ಮಾತುಕತೆ ನಡೆಸಿದ್ದೆ. ಅವರ ನಿಧನದಿಂದ ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ’ ಎಂದು ಮೋದಿ ಹೇಳಿದ್ದಾರೆ.

ಕೇಂದ್ರ ಸಚಿವ ಅನಿಲ್ ದವೆ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸಂತಾಪ ಸೂಚಿಸಿದ್ದು, `ಅನಿಲ್ ದವೆ ನಿಧನ ಆಘಾತ ತಂದಿದೆ. ಪ್ರಬುದ್ಧ ಮಾತುಗಾರ, ಮಾನವೀಯ ವ್ಯಕ್ತಿಯಾಗಿದ್ರು ದವೆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಅಂತಾ ಪತ್ರದ ಮೂಲಕ ತಿಳಿಸಿದ್ದಾರೆ.

ಅನಿಲ್ ಮಾಧವ್ ದವೆ ಅವರು ಜುಲೈ 6, 1956 ರಂದು ಮಧ್ಯಪ್ರದೇಶದ ಬದ್ ನಗರ್ ನಲ್ಲಿ ಜನಿಸಿದ್ದರು.

Click to comment

Leave a Reply

Your email address will not be published. Required fields are marked *