ದಾವಣಗೆರೆ: ಪ್ರೀತಿಸುವಂತೆ (Love) ಯುವತಿಗೆ ಪೀಡಿಸಿದ್ದ ಯುವಕನಿಗೆ ದಾವಣಗೆರೆಯ (Davangere) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ನಗರದ ಎಸ್‌ಓಜಿ ಕಾಲನಿ ಸಿ ಬ್ಲಾಕ್ ನಿವಾಸಿಯಾದ ನವೀನ್ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಆತ 2021ರ ಜೂ.19 ರಂದು ಹದಡಿ ರಸ್ತೆಯ ಮಾಲ್ ಮುಂಭಾಗ ತಂದೆಯೊಂದಿಗೆ ಬೈಕ್‌ನಲ್ಲಿ ಹೊರಟಿದ್ದ ಯುವತಿಯನ್ನು ಅಡ್ಡ ಹಾಕಿ ಪ್ರೀತಿಸುವಂತೆ ಅವಾಜ್ ಹಾಕಿದ್ದ. ಅಲ್ಲದೇ ಅವಾಚ್ಯವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿ, ಲಾಂಗ್‌ನಿಂದ ಹಲ್ಲೆ ಮಾಡಿದ್ದ. ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಳು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ನವೀನ್ ವಿರುದ್ಧ ದೂರು ದಾಖಲಾಗಿತ್ತು.
ಪೊಲೀಸ್ ಅಧಿಕಾರಿ ರೂಪಾ ತೆಂಬದ್ ತನಿಖೆ ಮಾಡಿ, ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಅಪರಾಧಿಗೆ 3 ತಿಂಗಳು ಜೈಲು ಶಿಕ್ಷೆ, 15 ಸಾವಿರ ರೂ. ದಂಡ ವಿಧಿಸಿ ತೀಪು ನೀಡಿದ್ದಾರೆ.
ಆರೋಪಿಯು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದುದರಿಂದ ಈ ಬಂಧನದ ಅವಧಿಯನ್ನು ಪರಿಗಣಿಸಿ, ಶಿಕ್ಷಾ ಅವಧಿಯನ್ನು ಕಡಿತಗೊಳಿಸಲಾಗಿದೆ. ಅಪರಾಧಿಯಿಂದ ವಸೂಲು ಮಾಡಿದ 10 ಸಾವಿರ ರೂ. ಹಣವನ್ನು ಸಂತ್ರಸ್ತೆಗೆ ಪರಿಹಾರ ನೀಡಲು, ಉಳಿದ 5 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ.
ಸರ್ಕಾರದ ಪರ ಸರ್ಕಾರಿ ವಕೀಲ ಬಿ.ಮಂಜುನಾಥ ವಾದ ಮಂಡಿಸಿದ್ದರು.