ದಾವಣಗೆರೆ: ಮಹಿಳೆಯನ್ನು ವಶೀಕರಣ ಮಾಡಲು ಬಂದ ಇಬ್ಬರಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಚ್ವಂಗಿಪುರ ಗ್ರಾಮದಲ್ಲಿ ನಡೆದಿದೆ.
ಉಚ್ವಂಗಿಪುರ ಗ್ರಾಮದ ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಎಂಬವರನ್ನು ವಶೀಕರಣ ಮಾಡಲು ಬಂದಿದ್ದೇವೆ ಎಂದು ಯುವಕರು ಹೇಳಿದ್ದಾರೆ. ಇಂದು ಗ್ರಾಮಕ್ಕೆ ಆಗಮಿಸಿದ್ದ ಮಹಿಳೆಯನ್ನು ವಶೀಕರಣ ಮಾಡಲು ಯುವಕರು ಮುಂದಾಗಿದ್ದರು. ವಿಷಯ ತಿಳಿದು ಗ್ರಾಮಸ್ಥರು ಯುವಕರನ್ನು ಹಿಡಿದು ಥಳಿಸಿದ್ದಾರೆ.
ಗ್ರಾಮದಲ್ಲೇ ವ್ಯಕ್ತಿಯೊಬ್ಬರಿಂದ 70 ಸಾವಿರ ರೂ. ಪಡೆದು ಮಹಿಳೆಯನ್ನು ವಶೀಕರಣ ಮಾಡಲು ಬಂದಿದ್ದು, ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಮಾತ್ರ ಯುವಕರು ಬಾಯಿ ಬಿಡುತ್ತಿಲ್ಲ. ನಾವು ವಶೀಕರಣ ಮಾಡಲು ಬಂದಿದ್ದು ಮುಂಗಡವಾಗಿ 20 ಸಾವಿರ ರೂ. ನೀಡಿದ್ದರು ಎಂದು ಒಪ್ಪಿಕೊಂಡಿದ್ದಾರೆ.
ವಶೀಕರಣ ಮಾಡಲು ಬಂದವರು ದಾವಣಗೆರೆಯ ಗಡಿಯಾರ ಕಂಬದ ಬಳಿ ವಾಸವಾಗಿದ್ದೇವೆ ಎಂದು ಹೇಳುತ್ತಿದ್ದು, ಮಣಿಕಂಠ ಮತ್ತು ವಿವೇಕ್ ಎಂದು ಹೆಸರು ಹೇಳಿದ್ದಾರೆ. ಇಬ್ಬರನ್ನು ಬಿಳಚೋಡು ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.