– ಜೀವನಾಂಶ ಕೊಡದೆ ಪರಾರಿಯಾದ ಪ್ರಾಧ್ಯಾಪಕ
ದಾವಣಗೆರೆ: ನ್ಯಾಯಾಲಯದ ಆದೇಶವಿದ್ದರೂ ತಮಗೆ ಜೀವನಾಂಶ ಕೊಡದೆ ತಲೆಮರೆಸಿಕೊಂಡಿರುವ ಪತಿಯನ್ನು ಹುಡುಕಿಕೊಡುವಂತೆ ದಾವಣಗೆರೆಯಲ್ಲಿ ಮಹಿಳೆಯೊಬ್ಬರು ಗಂಡನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಗರದ ಸಿದ್ಧವೀರಪ್ಪ ಬಡಾವಣೆ ನಿವಾಸಿ ಎಸ್.ರೇಣುಕಾ ಪತಿಗಾಗಿ ಹುಡುಕಾಟ ನಡೆಸುತ್ತಿರುವ ಮಹಿಳೆಯಾಗಿದ್ದಾರೆ. ಈ ಕುರಿತು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿರುವ ರೇಣುಕಾ ಅವರು, ಜಿಲ್ಲೆಯ ಚನ್ನಗಿರಿ ತಾಲೂಕು ನಲೂರು ಗ್ರಾಮದ ವಾಸಿಯಾಗಿರುವ ನನ್ನ ಪತಿ ಅನಾಟಮಿ ಪ್ರೊಫೆಸರ್ ಡಾ. ಟಿ.ಮಂಜಪ್ಪ, ನನ್ನನ್ನು ತೊರೆದು 2ನೇ ಮದುವೆಯಾಗಿದ್ದಾರೆ. ನ್ಯಾಯಾಲಯವು ನನಗೆ 12,000 ರೂ. ಹಾಗೂ ಇಬ್ಬರು ಮಕ್ಕಳಿಗೆ ತಲಾ 2,500 ರೂ. ಮಾಸಿಕ ಜೀವನಾಂಶ ಕೊಡುವಂತೆ 2014ರಲ್ಲಿ ಆದೇಶಿಸಿತ್ತು. ಆದರೂ ಜೀವನಾಂಶ ಕೊಡದೆ ಕಿರಿಯ ಮಗನನ್ನು ಜೊತೆಯಲ್ಲಿ ಕರೆದುಕೊಂಡು 2015ರಿಂದ ತಲೆಮರೆಸಿಕೊಂಡಿದ್ದಾರೆ. ಮಾಸಿಕ 2 ಲಕ್ಷ ರೂ.ಗೂ ಹೆಚ್ಚು ವರಮಾನವಿದ್ದರೂ ನನ್ನ ಹಾಗೂ ನನ್ನ ಹಿರಿಯ ಮಗನ ಜೀವನಾಂಶಕ್ಕೆ ಹಣ ಕೊಡದೆ ವಂಚಿಸಿದ್ದಾರೆ. ವಾರೆಂಟ್ ಇದ್ದರೂ ಈವರೆಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ದೂರಿದ್ದಾರೆ.
Advertisement
Advertisement
ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಾನು ಜೀವನಾಂಶ ಸಿಗದೆ ಇನ್ನೊಬ್ಬರ ಹಂಗಿನಲ್ಲಿ ಬದುಕುತ್ತಿರುವೆ. ಇಬ್ಬರು ಮಕ್ಕಳಲ್ಲಿ ಚಿಕ್ಕ ಮಗನನ್ನು ಪತಿ ಡಾ.ಮಂಜಪ್ಪ ಕರೆದುಕೊಂಡು ಹೋಗಿರುವುದರಿಂದ ಮಕ್ಕಳ ಸಹೋದರತ್ವ ಮತ್ತು ಬಾಲ್ಯದ ಜೀವನವನ್ನು ಒಟ್ಟಿಗೆ ಕಳೆಯುವ ಅವಕಾಶವನ್ನು ತಪ್ಪಿಸಿದ್ದಾರೆ ಎಂದು ಎಸ್.ರೇಣುಕಾ ಆರೋಪಿಸಿದ್ದಾರೆ.
Advertisement
ಪತಿ ಅನಧಿಕೃತವಾಗಿ ಎರಡನೇ ಮದುವೆಯಾಗಿ ಅವಳೊಂದಿಗೆ ಸಂಸಾರ ಮಾಡಿಕೊಂಡು ಸುಖವಾಗಿದ್ದಾರೆ. ಆಗಾಗ ತಮ್ಮೂರಿಗೆ ಬಂದು ಹೋಗುತ್ತಿದ್ದರೂ ಪೊಲೀಸರು ಪತ್ತೆ ಹಚ್ಚುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ನ್ಯಾಯಾಲಯದ ಆದೇಶಗಳಿಗೂ ಬೆಲೆ ಕೊಡದೆ, ಪೊಲೀಸ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ನನಗೆ ತೊಂದರೆ ಕೊಡುವ ಉದ್ದೇಶದಿಂದ ತಲೆಮರೆಸಿಕೊಂಡಿದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು, ಚಾಲ್ತಿಯಲ್ಲಿರುವ ವಾರಂಟ್ ಜಾರಿ ಮಾಡಿ ನನಗೂ ಮತ್ತು ನನ್ನ ಮಗನಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ರೇಣುಕಾ ಕಣ್ಣೀರಿಟ್ಟಿದ್ದಾರೆ.