Connect with us

Davanagere

ಪರಂ ಪಿಎ ರಮೇಶ್ ಸಾವು ಸಹಜವಲ್ಲ, ಆತನನ್ನು ಮುಗಿಸಲಾಗಿದೆ: ರೇಣುಕಾಚಾರ್ಯ

Published

on

ದಾವಣಗೆರೆ: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಸಾವು ಸಹಜ ಸಾವು ಅಲ್ಲ. ಆತನನ್ನು ಮುಗಿಸಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.

ನಗರದ ನಾಯಕರ ವಿಧ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಗೆ ಆಗಮಿಸಿ, ಶ್ರೀಗಳ ಫೋಟೋಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಸಾವು ಸಹಜ ಸಾವು ಅಲ್ಲ. ಆತನನ್ನು ಮುಗಿಸಲಾಗಿದೆ. ಆತನ ಸಾವಿಗೆ ಬೇರೆ ಬೇರೆ ಕಾರಣಗಳು ಇವೆ. ಇದಕ್ಕೆಲ್ಲ ಡಾ.ಜಿ.ಪರಮೇಶ್ವರ್ ಅವರೇ ಉತ್ತರಿಸಬೇಕು ಎಂದರು.

ರಮೇಶ್ ಸಾವಿಗೆ ಐಟಿ ಅಥವಾ ಕೇಂದ್ರ ಸರ್ಕಾರ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಐಟಿ ಇಲಾಖೆಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮೇಲಾಗಿ ಪರಮೇಶ್ವರ್ ಅವರು ಬೆಂಗಳೂರಿನಲ್ಲಿಯೇ ಇದ್ದರು. ಆದರು ಸಹ ಅಧಿವೇಶನದಲ್ಲಿ ಏಕೆ ಭಾಗವಹಿಸಲಿಲ್ಲ. ಸದನದಲ್ಲಿ ಭಾಗವಹಿಸಿ ಈ ಬಗ್ಗೆ ಮಾತಾಡಬಹುದಿತ್ತು. ರಮೇಶ್ ಸಾವಿನ ಬಗ್ಗೆ ನಾನಾ ಸಂಶಯಗಳಿವೆ. ಇದು ತನಿಖೆಯಿಂದ ಬೆಳಕಿಗೆ ಬರಲಿದೆ ಎಂದು ಆರೋಪ ಮಾಡಿದರು.

ರಮೇಶ್ ಆತ್ಮಹತ್ಯೆ:
ಡಾ. ಜಿ ಪರಮೇಶ್ವರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ರಮೇಶ್ ಅವರ ಬಳಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು ಎನ್ನಲಾಗುತ್ತಿದೆ. ಇದರಿಂದ ನೊಂದಿದ್ದ ರಮೇಶ್ ನನ್ನ ಮರ್ಯಾದೆ ಹೋಯಿತು. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶನಿವಾರ ಬೆಳಗ್ಗೆ ತನ್ನ ಆಪ್ತರಿಬ್ಬರಿಗೆ ಕರೆ ಮಾಡಿ ತಿಳಿಸಿ, ತನ್ನ ಮೊಬೈಲನ್ನು ಸ್ವಿಚ್ಚ್ ಆಫ್ ಮಾಡಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ರಮೇಶ್ ಅವರು ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್ ನಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ರಮೇಶ್ ಆತ್ಮಹತ್ಯೆ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಮನೆಯವರು ಸ್ಥಳಕ್ಕೆ ದೌಡಾಯಿಸಿದ್ದು, ಆಕ್ರಂದನ ಮುಗಿಲುಮುಟ್ಟಿತ್ತು. ಅಲ್ಲದೆ ಇದೇ ವೇಳೆ ಪರಮೇಶ್ವರ್, ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ನಾಯಕರು ಕೂಡ ಘಟನಾ ಸ್ಥಳಕ್ಕೆ ಬಂದು ರಮೇಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದರು. ರಮೇಶ್ ಸ್ವಗೃಹ ರಾಮನಗರದ ಮೇಳಹಳ್ಳಿಯಲ್ಲಿ ಇಂದು ಒಕ್ಕಲಿಗರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.

Click to comment

Leave a Reply

Your email address will not be published. Required fields are marked *