ದಾವಣಗೆರೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ.ರೇಣುಕಾಚಾರ್ಯ ಹಾಗೂ ಅವರ ಸಹೋದರರು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡುತ್ತಿದ್ದಾರೆ. ಇವರ ದುರಾಡಳಿತದಿಂದ ಬೇಸತ್ತು ಫೆಬ್ರವರಿ 13 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಭ್ರಷ್ಟಾಚಾರ ವಿರೋಧಿ ವೇದಿಕೆ ಗೌರವಾಧ್ಯಕ್ಷ ಗುರುಪಾದಯ್ಯ ಮಠದ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಶಾಸಕರು ಹಾಗೂ ಅವರ ಸಹೋದರ ಸ್ವಜನ ಪಕ್ಷಪಾತ, ಸರ್ವಾಧಿಕಾರ ಧೋರಣೆ, ಅಸಂಬದ್ಧ ಮತ್ತು ಪ್ರಚೋದನಾತ್ಮಕ ಹೇಳಿಕೆಗಳಿಂದ ಅವಳಿ ತಾಲೂಕಿನಲ್ಲಿ ಅಶಾಂತಿ ಉಂಟಾಗಿ ಕೋಮುಸಾಮರಸ್ಯಕ್ಕೆ ಧಕ್ಕೆ ಒದಗುವ ಲಕ್ಷಣಗಳು ಗೋಚರಿಸುತ್ತವೆ. ಶಾಸಕರಿಗೆ ಮತ ಹಾಕದವರ ಹಾಗೂ ಅವರ ದುರಾಡಳಿತದ ಬಗ್ಗೆ ಮಾತನಾಡಿದರೆ ಹೊನ್ನಾಳಿ ವಿಧಾನಸಭೆ ಕ್ಷೇತ್ರವನ್ನು ತೊರೆದು ಹೋಗುವ ಸ್ಥಿತಿ ನಿರ್ಮಿಸಿ ರಿಪಬ್ಲಿಕ್ ಆಫ್ ಹೊನ್ನಾಳಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.
Advertisement
Advertisement
ಸರ್ಕಾರ ರೂಪಿಸಿದ ಮರಳು ನೀತಿಯನ್ನು ಉಲ್ಲಂಘಿಸಿ ಹಿಂಬಾಲಕರೊಂದಿಗೆ ಕಾನೂನು ಬಾಹಿರ ಮರಳು ಮಾಫಿಯಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಉದ್ಯೋಗ ಖಾತ್ರಿ ಮತ್ತು ವಿವಿಧ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅಣ್ಣ ತಮ್ಮಂದಿರಂತೆ ಬದುಕುತ್ತಿರುವ ಹಿಂದು ಮುಸ್ಲಿಮರ ಮಧ್ಯೆ ಕಿಚ್ಚು ಹಚ್ಚುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಇದೆಲ್ಲವನ್ನು ಖಂಡಿಸಿ ಏಕಾಂಕಿಯಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇನೆ. ಹೊನ್ನಾಳಿಯ ಭ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳಿಗೆ, ಪ್ರಧಾನಮಂತ್ರಿ ಹಾಗೂ ಬಿಜೆಪಿಯ ರಾಷ್ಟ್ರ ಹಾಗೂ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲು ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.