ದಾವಣಗೆರೆ: ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಳೆದ 2 ದಿನದಿಂದ ನಾಡ ಧ್ವಜದ ವಿಚಾರವಾಗಿ ಸಚಿವ ಸಿ.ಟಿ.ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ರಾಜ್ಯದ ಮರ್ಯಾದೆ ಕಳೆದಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
Advertisement
Advertisement
ಕನ್ನಡಿಗರ ಮತ ಪಡೆದು ಶಾಸಕ, ಸಚಿವರಾಗಿದ್ದಾರೆ. ಜನಪ್ರತಿನಿಧಿಗಳಾದವರು ಕನ್ನಡಿಗರ ಪರ ಕೆಲಸ ಮಾಡುತ್ತಾರೆಂಬ ಭರವಸೆ ಇತ್ತು. ಆದರೆ ಅವರು ಕನ್ನಡದ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಕೈ ಹಾಕಿರುವುದು ಖಂಡನೀಯ. ರಾಷ್ಟ್ರೀಯತೆ ಹೆಸರಿನಲ್ಲಿ ಕನ್ನಡ ಕೊಲ್ಲುವ ಕೆಲಸ ಮಾಡುವುದು ಸರಿಯಲ್ಲ ಎಂದು ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
Advertisement
Advertisement
ಕನ್ನಡದ ಬಾವುಟ ಬೇಡ ಆದ್ದರಿಂದ ನವೆಂಬರ್ 1 ರಂದು ಕನ್ನಡ ಧ್ವಜ ಹಾರಿಸುವ ಬದಲು ರಾಷ್ಟ್ರಧ್ವಜ ಒಂದೇ ಸಾಕು ಎಂದು ಹೇಳಿರುವುದು ಕನ್ನಡಿಗರಿಗೆ ಅಪಮಾನ ಮಾಡಿದಂತೆ ಈ ಕೂಡಲೇ ಅವರು ಕನ್ನಡಿಗರಿಗೆ ಕ್ಷಮೆ ಕೋರಬೇಕು ಎಂದರು. ಅಲ್ಲದೆ ನಮಗೆ ತಲೆ ಕೆಟ್ಟಿದೆ ನಮ್ಮನ್ನು ಆಸ್ಪತ್ರೆಗೆ ಸೇರಿಸಿ ಎಂಬ ಸಚಿವರುಗಳ ಭಾವಚಿತ್ರದ ಭಿತ್ತಿಪತ್ರ ಪ್ರದರ್ಶಿಸಿ ಅವುಗಳನ್ನು ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.