ದಾವಣಗೆರೆ: ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿಯಲ್ಲಿ ಕಲ್ಲಿನ ನಾಗನಿಗೆ ಹಾಲು ಎರೆಯುವ ಬದಲು ಮಕ್ಕಳಿಗೆ ಹಾಲು ನೀಡಿ ಎಂದು ದಾವಣಗೆರೆಯಲ್ಲಿ ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.
ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಬಿಜಿಎಂ ಶಾಲೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಡೆದ 22 ವರ್ಷದ ಕಲ್ಲುನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಎಂಬ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ ಅವರು, ದೇಶಾದ್ಯಂತ ಎರಡು ಮೂರು ದಿನಗಳಲ್ಲಿ ನಾಗರ ಪಂಚಮಿ ಆಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಲೀಟರ್ ನಷ್ಟು ಹಾಲನ್ನು ನಾಗರ ಮೂರ್ತಿಗಳಿಗೆ ಹುತ್ತಗಳಿಗೆ ಎರೆದು ಪೋಲು ಮಾಡುತ್ತಿದ್ದಾರೆ. ಅದನ್ನು ಮಕ್ಕಳಿಗೆ ನೀಡಿದರೆ ಸದೃಢವಾದಂತಹ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಾಲು ಹುತ್ತಕ್ಕೆ ಹಾಕುವುದರಿಂದ ಹಾವುಗಳು ಸಹ ಸಾವನ್ನಪ್ಪುವ ಘಟನೆಗಳು ನಡೆದಿದೆ. ಅದ್ದರಿಂದ ಕೇವಲ ಪೂಜೆ ಯನ್ನು ಸಲ್ಲಿಸಿ, ಹಾಲನ್ನು ಮಕ್ಕಳಿಗೆ ವಿತರಣೆ ಮಾಡುವುದರ ಮೂಲಕ ಹಬ್ಬವನ್ನು ಆಚರಣೆ ಮಾಡಿ ಎಂದು ಕರೆ ನೀಡಿದರು. ಶಾಲೆಯ ಮಕ್ಕಳಿಗೆ ಹಾಲು ಹಾಗೂ ಬನ್ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಾಲನ್ನು ವ್ಯಯ ಮಾಡಿ ಹಬ್ಬವನ್ನು ಆಚರಿಸುವ ಬದಲಾಗಿ ಮಕ್ಕಳಿಗೆ ಉಣಬಡಿಸುವ ಮೂಲಕ ಹಬ್ಬ ಆಚರಣೆ ಮಾಡಬೇಕು. ಅಲ್ಲದೇ ರಾಜ್ಯ ಸರ್ಕಾರ ಇದನ್ನು ಶಿಕ್ಷಣ ಇಲಾಖೆ ವತಿಯಿಂದ ಹಾಲು ಕುಡಿಯುವ ಹಬ್ಬವನ್ನಾಗಿ ಆಚರಣೆ ಮಾಡಬೇಕು. ಇದರಿಂದ ಎಲ್ಲಾ ಜಾತಿಯ, ಸಮುದಾಯದ ಮಕ್ಕಳು ಹಾಲು ಕುಡಿಯುವುದರಿಂದ ಭಾವೈಕ್ಯತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.