ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮಗುವಿನ ಪೋಷಕರು ವೈದ್ಯರ ಮನೆ ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಗಳೂರು ಪಟ್ಟಣದಲ್ಲಿ ನಡೆದಿದೆ.
ಜಗಳೂರು ತಾಲೂಕಿನ ಗುಡ್ಡದಲಿಂಗನಹಳ್ಳಿ ಹನಮಂತಪ್ಪ, ಕರಿಬಸಮ್ಮ ದಂಪತಿಯ ಪುತ್ರಿ ಸಹನಾ (3) ಮೃತ ಬಾಲಕಿ. ವೈದ್ಯ ಕೆ.ವಿ. ಶಿವಪ್ರಕಾಶ್ ನಿರ್ಲಕ್ಷ್ಯವೇ ಸಹನಾ ಸಾವಿಗೆ ಕಾರಣ ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ. ಘಟನೆಯು ಶುಕ್ರವಾರ ಸಂಜೆ ನಡೆದಿದ್ದು, ಶಿವಪ್ರಕಾಶ್ ಅವರ ಮನೆಯ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
Advertisement
Advertisement
ಸಹನಾಗೆ ಶುಕ್ರವಾರ ಬೆಳಗ್ಗೆ ಜ್ವರ ಬಂದಿತ್ತು. ಹೀಗಾಗಿ ಹನಮಂತಪ್ಪ ಅವರು ಮಗಳನ್ನು ಕರೆದುಕೊಂಡು ಜಗಳೂರು ಪಟ್ಟಣದಲ್ಲಿರುವ ವೈದ್ಯ ಶಿವಪ್ರಕಾಶ್ ಅವರ ಬಳಿಗೆ ಬಂದಿದ್ದರು. ಶಿವಪ್ರಕಾಶ್ ಸಹನಾಗೆ ಚಿಕಿತ್ಸೆ ನೀಡುತ್ತಿದ್ದಂತೆ ಆಕೆಯ ಬಾಯಿಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ವೈದ್ಯ ಶಿವಪ್ರಸಾದ್, ತಕ್ಷಣವೇ ಮಗುವನ್ನು ದಾವಣಗೆರೆಗೆ ಕರೆದುಕೊಂಡು ಹೋಗಿ ಎಂದು ಹನಮಂತಪ್ಪ ಅವರಿಗೆ ಹೇಳಿದ್ದಾರೆ.
Advertisement
ವಾಹನ ವ್ಯವಸ್ಥೆ ಮಾಡಿಕೊಂಡು ದಾವಣಗೆರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಸಹನಾ ಸಾವನ್ನಪ್ಪಿದ್ದಾಳೆ. ಇದರಿಂದ ಕೋಪಕೊಂಡ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು, ಸಹನಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ವೈದ್ಯ ಶಿವಪ್ರಕಾಶ್ ಅವರ ಮನೆ ಮುಂಭಾಗದಲ್ಲಿ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿ, ಮನೆಗೆ ಕಲ್ಲು ಎಸೆದು ಕಿಡಕಿಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.