ದಾವಣಗೆರೆ: ಬೆಂಬಲಿಗರ ಗುಂಪು ಕಟ್ಟಿಕೊಂಡು ನಗರ ಸುತ್ತಾಟ ನಡೆಸಿದ್ದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮನೆ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಕೊರೊನಾ ಜಾಗೃತಿ ಅಂತ ಹೇಳಿ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ದಾವಣಗೆರೆ ನಗರ ಸುತ್ತುತ್ತಿದ್ದಾರೆ.
ನಗರದ ದುರ್ಗಾಂಬಿಕಾ ದೇವಸ್ಥಾನ ಪ್ರದೇಶದಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ರೇಣುಕಾಚಾರ್ಯ ಅವರಿಗೆ ಮೇಯರ್ ಬಿ.ಜೆ.ಅಜಯಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಉಮಾ ರಮೇಶ್ ಸಾಥ್ ಸೇರಿದಂತೆ ಅನೇಕ ಕಾರ್ಯಕರ್ತರು, ಬೆಂಬಲಿಗರು ಸಾಥ್ ನೀಡಿದರು. ಹತ್ತಾರು ಜನ ಬೀದಿಯಲ್ಲಿ ಸುತ್ತಿದ್ದರೂ ಜಿಲ್ಲಾಡಳಿ ಮೌನಕ್ಕೆ ಶರಣಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ರೇಣುಕಾಚಾರ್ಯ ಅವರನ್ನ ತರಾಟೆಗೆ ತೆಗೆದುಕೊಂಡರು. ಹೀಗೆ ಗುಂಪು ಕಟ್ಟಿಕೊಂಡು ಜಾಗೃತಿ ಮೂಡಿದುವುದು ಸರಿಯಲ್ಲ. ಇದರಿಂದ ಮತ್ತಷ್ಟು ತೊಂದರೆಯಾಗುತ್ತದೆ. ಇದು ಪ್ರಚಾರದ ಸಮಯವಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ರೇಣುಕಾಚಾರ್ಯ, ಜನರರಲ್ಲಿ ಜಾಗೃತಿ ಮೂಡಿಸಲು ನಾಲ್ಕು ಜನರೊಂದಿಗೆ ಹೋಗಿದ್ದೆ. ಜಿಲ್ಲಾಧಿಕಾರಿಗಿಂತ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಇಂತಹ ಸಂದರ್ಭದಲ್ಲಿ ನಾನೇನು ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿದರು.