– ನಾವು ಕುರ್ಚಿ ಮೇಲೆ ಕೂರಲು ಅನರ್ಹರೆ ಕಾರಣ
ದಾವಣಗೆರೆ: ಹದಿನೇಳು ಜನ ಅನರ್ಹ ಶಾಸಕರು ಬಿಜೆಪಿ ಸೇರಿದ್ದಾರೆ ಎಂದು ಹೇಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಪೇಚಿಗೆ ಸಿಲುಕಿದ ಪ್ರಸಂಗ ನಗರದಲ್ಲಿ ನಡೆದಿದೆ.
ನಗರದ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿರುವ ಜೆ.ಎಚ್.ಪಾಟೀಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಶಾಸಕರು ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಹೊಸ ಜಿಲ್ಲೆ ಮಾಡುವುದರಿಂದ ಆಡಳಿತಕ್ಕೆ ಒಳ್ಳೆಯದಾಗುತ್ತದೆ. ಹೊಸ ಜಿಲ್ಲೆ ಮಾಡಿ ಎಂದು ನಿಯೋಗವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಮನವಿ ಇಟ್ಟಿತ್ತು. ಅಷ್ಟೇ ಅಲ್ಲದೆ ಹೊಸ ಜಿಲ್ಲೆಗೆ ಹಲವು ಶಾಸಕರ ವಿರೋಧ ಕೂಡ ಇದೆ. ನಾಳೆ ಸಿಎಂ ಸಭೆ ಕರೆದಿದ್ದಾರೆ. ಅಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲಾಗುತ್ತದೆ ಎಂದು ತಿಳಿಸಿದರು.
Advertisement
Advertisement
ನನ್ನ ನಡಿಗೆ ತಂತಿ ಮೇಲಿನ ನಡಿಗೆಯಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿರುವುದನ್ನು ಪ್ರತಿಪಕ್ಷಗಳು ಕುತಂತ್ರದಿಂದ ಬಳಸಿಕೊಳ್ಳುತ್ತಿವೆ. ಅವರು ಸುಮ್ಮನೆ ತಂತಿ ಮೇಲೆ ನಡಿಗೆ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಯಡಿಯೂರಪ್ಪನವರು ಸಂಕಷ್ಟಗಳನ್ನು ಸಮರ್ಪಕವಾಗಿ ಎದುರಿಸುತ್ತಾರೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮೂರುವರೇ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ ಎನ್ನುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಇದೇ ಸಂದರ್ಭದಲ್ಲಿ ಅನರ್ಹ ಶಾಸಕರು ಬಿಜೆಪಿ ಸೇರುತ್ತಾರೆ ಎಂದು ಬಾಯಿತಪ್ಪಿ ಹೇಳಿ ಪೇಚೆಗೆ ಸಿಲುಕಿಹಾಕಿಕೊಂಡರು. ನಂತರ ಉಲ್ಟಾ ಹೊಡೆದು ಬಾಯಿ ತಪ್ಪಿನಿಂದ ನಾನು ಹೇಳಿದ್ದೇನೆ. ಅವರೇನಾದರು ಬಿಜೆಪಿಗೆ ಸೇರ್ಪಡೆಯಾದರೆ ಉಪ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಅನ್ನು ಅವರಿಗೆ ಕೊಡಲಾಗುತ್ತದೆ. ಅವರಿಂದಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ, ನಾವು ಕುರ್ಚಿ ಮೇಲೆ ಕೂರಲು ಅವರು ಕಾರಣ ಎಂದು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡರು.