ದಾವಣಗೆರೆ: ದಸರಾ ಶೋಭಾಯಾತ್ರೆ ಅಂಗವಾಗಿ ಇಂದು ದಾವಣಗೆರೆಯಲ್ಲಿ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಈ ರ‍್ಯಾಲಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ನಾರಿಮಣಿಯರು ಸಾಂಪ್ರದಾಯಿಕ ಉಡುಪಿನಲ್ಲಿ ಸಖತ್ ಮಿಂಚಿದ್ದಾರೆ.
ನಗರದ ರಾಮ್ ಅಂಡ್ ಕೋ ಸರ್ಕಲ್‍ನಿಂದ ಪ್ರಾರಂಭವಾದ ರ‍್ಯಾಲಿಗೆ ಮಹಿಳಾ ಸಿಪಿಐ ನಾಗಮ್ಮ ಚಾಲನೆ ನೀಡಿದರು. ವಿಜಯದಶಮಿಯಂದು ನಡೆಯುವ ಶೋಭಾಯಾತ್ರೆಯ ಪ್ರಯುಕ್ತ ಜಾಗೃತಿ ಬೈಕ್ ರ‍್ಯಾಲಿಯನ್ನು ಮಹಿಳೆಯರು ಹಮ್ಮಿಕೊಂಡಿದ್ದರು. ರ‍್ಯಾಲಿಯಲ್ಲಿ ಮಹಿಳೆಯರು ಕೇಸರಿ ಪೇಟ ಧರಿಸಿ ದುರ್ಗಿಯರಂತೆ ಕಂಗೊಳಿಸುತ್ತಿದ್ದರು. ಕೆಲ ಮಹಿಳೆಯರು ಸ್ಕೂಟಿಯಲ್ಲಿ ಬಂದಿದ್ದರೆ, ಇನ್ನೂ ಕೆಲವರು ಬುಲೆಟ್ ಬೈಕ್ ಸವಾರಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
Advertisement
Advertisement
ನಗರದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಭಗವಧ್ವಜ ಹಿಡಿದು, ಜೈಕಾರ ಹಾಕಿ ರ‍್ಯಾಲಿಯನ್ನು ಯಶಸ್ವಿಗೊಳಿಸಿದರು. ದಸರಾ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ಧೂರಿಯಾಗಿ ಶೋಭಾಯಾತ್ರೆ ನಡೆಸಲಾಗುವುದು. ಈ ಬಾರಿ ಮಹಿಳೆಯರು ಅತಿ ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಶೋಭಾಯಾತ್ರೆಯನ್ನು ಯಶ್ವಸಿಗೊಳಿಸಬೇಕೆಂದು ರ‍್ಯಾಲಿಯಲ್ಲಿ ಪಾಲ್ಗೊಂಡವರು ಮನವಿ ಮಾಡಿಕೊಂಡರು.