– ಸಾಸ್ವೇಹಳ್ಳ ಏತ ನೀರಾವರಿಗೆ ಒತ್ತಾಯಿಸಿ ಮತದಾನ ಬಹಿಷ್ಕಾರ
ದಾವಣಗೆರೆ: ಸಾಸ್ವೇಹಳ್ಳ ಏತ ನೀರಾವರಿ ಯೋಜನೆಗೆ ಚನ್ನಗಿರಿ ತಾಲೂಕಿನ ಎನ್.ಬಸವನಹಳ್ಳಿ ಗ್ರಾಮವನ್ನು ಸೇರಿಸಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು ಇಂದು ಮತದಾನವನ್ನು ಬಹಿಷ್ಕರಿಸಿದ್ದಾರೆ.
ಎನ್.ಬಸವನಹಳ್ಳಿ ಗ್ರಾಮದಲ್ಲಿ 387 ಮತದಾರರಿದ್ದು ಕೇವಲ ಒಬ್ಬರೇ ಮತವನ್ನು ಚಲಾವಣೆ ಮಾಡಿದ್ದಾರೆ. ಉಳಿದಂತೆ ಗ್ರಾಮದ ಮತಗಟ್ಟೆಯಲ್ಲಿ ನಿಯೋಜನೆಗೊಂಡಿದ್ದ 8 ಮಂದಿ ಬೂತ್ ಏಜೆಂಟ್‍ಗಳು ಮತವನ್ನು ಚಲಾಯಿಸಿದ್ದಾರೆ.
ನಮ್ಮ ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಕೊರತೆ ಇದೆ. ಸಾಸ್ವೇಹಳ್ಳ ಏತ ನೀರಾವರಿ ಯೋಜನೆ ನಮ್ಮ ಗ್ರಾಮಕ್ಕೂ ಸಿಕ್ಕರೆ ಕುಡಿಯುವ ನೀರು ಹಾಗೂ ನೀರಾವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.
ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗಳು ಬಂದು ಕುಳಿತರೂ ಗ್ರಾಮದ ಯಾರೊಬ್ಬರೂ ಹೋಗಿ ಮತ ಹಾಕಲೇ ಇಲ್ಲ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಚನ್ನಗಿರಿ ತಾಲೂಕಿನ ತಹಶೀಲ್ದಾರ್ ಚಂದ್ರಕುಮಾರ್ ಅವರು, ಗ್ರಾಮಸ್ಥರ ಮನವೊಲಿಕೆಗೆ ಮುಂದಾದರು. ಆದರೆ ಗ್ರಾಮಸ್ಥರು ಮಾತ್ರ ಪಟ್ಟುಬಿಡಲೇ ಇಲ್ಲ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೂಡ ಗ್ರಾಮಕ್ಕೆ ಭೇಟಿ ನೀಡಿ, ಬೇಡಿಕೆಗಳನ್ನು ಈಡೇರಿಸಲು ಸಮಯ ಕೇಳಿದರು. ಆದರೆ ಗ್ರಾಮಸ್ಥರು, ಒಂದು ತಿಂಗಳ ಒಳಗಡೆ ಸಾಸ್ವೆಹಳ್ಳಿ ಏತ ನೀರಾವರಿಗೆ ಗ್ರಾಮವನ್ನು ಸೇರಿಸಬೇಕು ಎಂದು ಪಟ್ಟು ಹಿಡಿದರು.
ಸಾಸ್ವೇಹಳ್ಳ ಏತ ನೀರಾವರಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಓಂಕಾರಪ್ಪ ಹಾಗೂ ಚುನಾವಣಾ ಅಧಿಕಾರಿ (ಇಓ) ಪ್ರಕಾಶ್ ಅವರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿ ವಿಫಲರಾದರು. ಪರಿಣಾಮ ಸಂಧಾನ ವಿಫಲವಾಗಿದ್ದರಿಂದ 8 ಮಂದಿ ಬೂತ್ ಏಜೆಂಟ್ ಹೊರತು ಪಡಿಸಿ ಬೆಳಗ್ಗೆಯಿಂದ ಸಂಜೆಯವರೆಗೂ ಒಂದೇ ಒಂದು ಮತ ಚಲಾವಣೆಯಾಗಿದೆ.