ಮೌಢ್ಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟ ಮುರುಘಾ ಶ್ರೀ ಡಾ. ಶಿವಮೂರ್ತಿ ಶರಣರು

Public TV
2 Min Read
Murugha Sri

ದಾವಣಗೆರೆ: ಅಸಹಾಯಕ ಪರಿಸ್ಥಿತಿಯಲ್ಲಿ ದೇವದಾಸಿ ಪದ್ಧತಿಗೆ ಒಳಗಾದ ಅಮಾಯಕ ಮಹಿಳೆಯರು ಆ ಪ್ರವೃತ್ತಿಯಿಂದ ಹೊರಗೆ ಬರುವುದಾದರೆ ಸರ್ಕಾರಗಳು, ಸಂಘ-ಸಂಸ್ಥೆಗಳು ಮತ್ತು ಶ್ರೀಮಠ ನಿಮಗೆ ಸಹಾಯ ಹಸ್ತ ಚಾಚಲಿವೆ ಎಂದು ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಭರವಸೆ ನೀಡಿದ್ದಾರೆ.

ದಾವಣಗೆರೆಯಲ್ಲಿ ನಡೆದ ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 63 ನೇ ಸ್ಮರಣೋತ್ಸವ ಅಂಗವಾಗಿ ಶಿವಯೋಗಾಶ್ರಮದಲ್ಲಿ ದೇವದಾಸಿ ಮಹಿಳೆಯರ ಮೌಢ್ಯಾಚರಣೆ ನಿವಾರಣೆಗಾಗಿ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಕಾರ್ಯಕ್ರಮದಲ್ಲಿ ಐವರು ದೇವದಾಸಿ ಮಹಿಳೆಯರಿಗೆ ‘ಜಡೆ’ ಕತ್ತರಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಿ ಮಾತನಾಡಿದರು.

ಮನೆಯ ಪರಿಸ್ಥಿತಿ ಮತ್ತು ಮೌಢ್ಯತೆಗೆ ಒಳಗಾಗಿ ಹಲವಾರು ಅಮಾಯಕ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ತಳ್ಳಲಾಗಿರುತ್ತದೆ. ದೇವರ ಹೆಸರಿನಲ್ಲಿ ಬಿಡುವ ಈ ಮೌಢ್ಯಾಚರಣೆ ಅತ್ಯಂತ ಹೀನಾಯ ಆಚರಣೆ. `ದಾಸಿ’ ಎಂದರೆ ಗುಲಾಮಗಿರಿ ಇದು ನಿಕೃಷ್ಟ ಪದ್ಧತಿಯಾಗಿದ್ದು, ಈ ಸ್ಥಿತಿಯಿಂದ ನೀವೆಲ್ಲರೂ ಹೊರಬಂದು ಉತ್ತಮ ಬದುಕು ಕಟ್ಟಿಕೊಂಡರೆ ಸಮಾಜ ನಿಮ್ಮನ್ನು ಒಪ್ಪಿಕೊಳ್ಳುತ್ತದೆ ಎಂದು ಅಭಯ ನೀಡಿದರು.

Murugha Sri 1

ಬಸವಣ್ಣನವರು ಆ ಕಾಲದಲ್ಲಿಯೇ ಎಲ್ಲಾ ಸ್ಥರದ ಜನಗಳನ್ನು ಒಪ್ಪಿಕೊಂಡವರು. ಆಗಿನ ಸೂಳೆ ಸಂಕವ್ವೆಗೆ ತಿಳಿ ಹೇಳಿ ಆಕೆಯನ್ನು ಶರಣೆ ಸಂಕವ್ವೆಯನ್ನಾಗಿ ಮಾಡಿ, ಆಕೆಯಿಂದ ವಚನಗಳನ್ನು ಬರೆಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಚಿತ್ರದುರ್ಗದಲ್ಲಿ ಬಸವಜಯಂತಿ ದಿನದಂದು ದೇವದಾಸಿ ಮಹಿಳೆಯರಿಗೆ ಜಾಗೃತಿ ಮೂಡಿಸಿ, ಹಲವಾರು ಮಹಿಳೆಯರಿಗೆ ಪುನರುಜ್ಜೀವನ ಕಲ್ಪಿಸಿಕೊಡಲಾಗಿದೆ. ಇನ್ನಾದರೂ ದೇವದಾಸಿ ಮಹಿಳೆಯರು ಈ ಮೌಢ್ಯ ಬದುಕಿನಿಂದ ಆಚೆ ಬಂದು ಆಧುನಿಕ ಜೀವನಕ್ಕೆ ಹೊಂದಿಕೊಳ್ಳಿರಿ. `ಜಡೆ’ಗಳನ್ನು ಬಿಡದೆ ಕೂದಲನ್ನು ಸೋಪು, ಶ್ಯಾಂಪೂ ಹಾಕಿ ಸರಿಯಾಗಿ ತೊಳೆಯಿರಿ ಮತ್ತು ಬಾಚಿಕೊಳ್ಳಿ ಎಂದು ಕರೆ ನೀಡಿದರು.

ಮಕ್ಕಳಿಗೆ ಮುತ್ತು ಕಟ್ಟಿಸಿ ಎಂದು ಯಾವ ದೇವರು ಹೇಳುತ್ತಾನೆ? ಯಾವ ದೇವಿಯು ಮುತ್ತು ಕಟ್ಟಿಸಿಕೊಂಡವರಿಗೆ ವರ ನೀಡಿದ್ದಾಳೆ? ಸಿಡಿ ಹಾಯುವುದರಿಂದ ಸೇರಿರುವ ಗಂಡಸೆರಲ್ಲಾ ನಿಮ್ಮನ್ನು ನೋಡಿ ನಗುತ್ತಾರೆ. ನಿಮ್ಮ ಮನಸಾಕ್ಷಿ ಇದಕ್ಕೆ ಒಪ್ಪುತ್ತದೆಯೇ? ಮಹಿಳೆಯರ ಬದಲಾಗಿ ಗಂಡುಮಕ್ಕಳಿಗೆ ಸಿಡಿಹಾಯಲು ಹೇಳಿ ಎಂದ ಅವರು, ಈ ಎಲ್ಲಾ ಪದ್ಧತಿಗಳು ನಿಮ್ಮ ಮನಶಾಂತಿಗಾಗಿ ಆಚರಿಸುತ್ತಾ ಬಂದಿದ್ದೀರಿ. ಈ ಎಲ್ಲಾ ಅನಿಷ್ಠ ಪದ್ಧತಿಯಿಂದ ಹೊರಬಂದು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅವರು ದುಡಿದು ನಿಮ್ಮನ್ನು ಸಲಹುತ್ತಾರೆ ಆಗ ನಿಮ್ಮ ಮನಸ್ಸಿಗೆ ನಿಜವಾದ ಶಾಂತಿ ದೊರೆಯುತ್ತದೆ ಎಂದು ತಿಳಿಸಿದರು, ಇನ್ನು ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭುಶ್ರೀಗಳು ಮತ್ತು ಕುಪ್ಪುಸ್ವಾಮಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *