ದಾವಣಗೆರೆ: ಇನ್ಶೂರೆನ್ಸ್ (Insurance) ಹಣಕ್ಕಾಗಿ (Money) ಸಂಬಂಧಿಯನ್ನೇ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಪ್ರಕರಣ ನಡೆದ 24 ಗಂಟೆಗಳಲ್ಲೇ ದಾವಣಗೆರೆಯ (Davanagre) ಅಜಾದ್ ನಗರ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಬೂಬಜಾರ್‌ನ ಗಣೇಶ್ (24), ಹರಳಯ್ಯ ನಗರದ ಅನಿಲ್ (18) ಹಳೆ ಚಿಕ್ಕನಹಳ್ಳಿಯ ಶಿವಕುಮಾರ್ (25) ಮತ್ತು ಭಾರತ್ ಕಾಲೋನಿಯ ಮಾರುತಿ (24) ಎಂದು ಗುರುತಿಸಲಾಗಿದೆ. ಆರೋಪಿಗಳು ದಾವಣಗೆರೆ ಜಿಲ್ಲೆಯ ಇಮಾಂ ನಗರದ ಹಣ್ಣಿನ ವ್ಯಾಪಾರಿ ದುಗ್ಗೇಶಿ ಎಂಬಾತನನ್ನು ಕೊಲೆಗೈದಿದ್ದರು.
ಕೊಲೆಯಾದ ದುಗ್ಗೇಶಿ ಹಾಗೂ ಆರೋಪಿ ಗಣೇಶ್ ಇಬ್ಬರೂ ಸಂಬಂಧಿಕರು. ದುಗ್ಗೇಶಿಯ ಮೇಲೆ ಗಣೇಶ್ ಫೆಬ್ರವರಿಯಲ್ಲಿ 40 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ. ಇನ್ನೂ ಜನವರಿ ತಿಂಗಳಲ್ಲಿ ಪ್ರೀಮಿಯಂ ಹಣ ಕಟ್ಟಬೇಕಾಗಿದ್ದರಿಂದ ಮೊದಲೇ ಕೊಲೆಗೆ ಸಂಚು ನಡೆಸಿದ್ದ ಗಣೇಶ್, ದುಗ್ಗೇಶಿ ಹಾಗೂ ಆತನ ತಾಯಿಯ ಸಹಿ ಇರುವ ಚೆಕ್ ಮತ್ತು ಬಾಂಡ್‌ಗಳನ್ನು ಆತನ ಬಳಿಯೇ ಇಟ್ಟುಕೊಂಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಆರೋಪಿಗಳು ಮಂಗಳವಾರ ದುಗ್ಗೇಶಿಯನ್ನು ಬಸಾಪುರಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ಅನಾರೋಗ್ಯದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕತೆ ಕಟ್ಟಿದ್ದರು. ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ, ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.