ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಮೇಲೆ ಹೋರಿ ಹಾರಿದರೂ ಜನರ ಆಶೀರ್ವಾದಿಂದಾಗಿ ಯಾವುದೇ ಅಪಾಯವಾಗಲಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದ ಭಾಷಣದಲ್ಲಿ ಮಾತನಾಡಿದ ಸಚಿವರು, ಹೊನ್ನಾಳಿ ಮತದಾರರ ಆಶೀರ್ವಾದದಿಂದ ಹೋರಿ ಶಾಸಕರ ಮೇಲೆ ಹಾರಿದರೂ ಯಾವುದೇ ಅಪಾಯವಾಗಲಿಲ್ಲ. ಇದಕ್ಕೆಲ್ಲ ಹೊನ್ನಾಳಿ ಜನರ ಆಶೀರ್ವಾದವೇ ಕಾರಣ ಎಂದು ಹೇಳಿದ್ದಾರೆ.
ರೇಣುಕಾಚಾರ್ಯ ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಹಾಗಾಗಿ ಅವರನ್ನ ಸತತವಾಗಿ ಇಲ್ಲಿಂದ ಆರಿಸಿ ಕಳುಹಿಸುತ್ತಿದ್ದೀರಿ. ಅವರು ನಮ್ಮ ಕಚೇರಿಗೆ ಬಂದರೆ ಸಾಕು ಹೆದರಿಕೆಯಾಗುತ್ತದೆ. ಎಲ್ಲ ಶಾಸಕರು ಬಂದು ಟೀ ಕುಡಿದು ಹೋಗುತ್ತಾರೆ. ಆದರೆ ರೇಣುಕಾಚಾರ್ಯ ಎರಡು ಟೀ ಕುಡಿದು ಕೆಲಸ ಆಗಲೇ ಬೇಕು ಎಂದು ಕುಳಿತುಕೊಳ್ಳುತ್ತಾರೆ ಎಂದು ಶಾಸಕರನ್ನು ಕಿಚಾಯಿಸಿದರು.
ಬರೀ ಕೋಣ, ಎಮ್ಮೆ ಹತ್ರ ಗುದ್ದಿಸ್ಕೋ:
ಬಿಜೆಪಿ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹೂಗುಚ್ಚ ಕೊಡಲು ಹೋಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಬೈಗುಳ ತಿಂದ ಪ್ರಸಂಗ ಮಂಗಳವಾರ ನಡೆದಿತ್ತು. ಶಾಸಕರು ತಮ್ಮ ಆಪ್ತ ಸಹಾಯಕನ ಜೊತೆ ಸಿಎಂ ಕೊಠಡಿಗೆ ಹೋಗಿದ್ದರು. ಆದರೆ ಅಲ್ಲಿ ಸಿಎಂ ಬ್ಯುಸಿ ಇದ್ದಿದ್ದರಿಂದ ಹೂಗುಚ್ಚ ಕೊಡಲು ಆಗಿರಲಿಲ್ಲ. ಹೀಗಾಗಿ ಸಿಎಂ ಸುದ್ದಿಗೋಷ್ಠಿ ನಡೆಸಿದಾಗ ಮಧ್ಯೆ ಪ್ರವೇಶಿಸಿದ ಶಾಸಕರು ಹೂಗುಚ್ಚ ಕೊಡಲು ಮುಂದಾಗಿದ್ದರು. ಇದರಿಂದ ಗರಂ ಆದ ಸಿಎಂ ಯಡಿಯೂರಪ್ಪ, ‘ಏನೋ ನೀನೇನೋ ಮಧ್ಯದಲ್ಲಿ ಬಂದು ಹಿಡ್ಕೊಂಡು ಹೋಗ್ತಿಯಲ್ಲೋ. ಕೊಡೋ ಹಾಗಿದ್ದರೆ ಕೊಡಲೇ. ಅಲ್ಲಿ ಊಟ ಮಾಡ್ತಾ ಇದ್ದೇ ತಾನೇ ಮಾಡು ಹೋಗು. ಬರೀ ಕೋಣ, ಎಮ್ಮೆ ಹತ್ರ ಗುದ್ದುಸ್ಕೋ ಎಂದು ಹೇಳಿದ್ದರು.
ಹೊನ್ನಾಳಿ ಹೋರಿಗೆ ರಿಯಲ್ ಹೋರಿ ಡಿಚ್ಚಿ:
ನವೆಂಬರ್ 1ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಕಾರ್ಯಕ್ರಮವಿತ್ತು. ಶಾಸಕರು ಇದರ ಮುಖ್ಯ ಅತಿಥಿಯಾಗಿದ್ದರು. ಹೀಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಊರ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ರೇಣುಕಾಚಾರ್ಯ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಿದ್ದರು. ಈ ಸಮಯದಲ್ಲಿ ಜನರ ಕಿರುಚಾಟಕ್ಕೆ ಹೆದರಿ ಓಡಿಬಂದ ಹೋರಿ ಶಾಸಕರಿಗೆ ಗುದ್ದಿದೆ. ಹೋರಿ ಗುದ್ದಿದ ರಭಸಕ್ಕೆ ಶಾಸಕರು ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿದೇ ಸಣ್ಣ ಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದರು.