ದಾವಣಗೆರೆ: ಬೇರೊಬ್ಬನ ಜೊತೆ ಮದುವೆ ಆಗಬೇಡ ಎಂದ ಪ್ರೇಮಿಯ ಮೇಲೆಯೇ ಪ್ರೇಯಸಿ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿದ ಘಟನೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ವಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಡ್ಡೇನಹಳ್ಳಿ ಗ್ರಾಮದ ಲಕ್ಷ್ಮೀ ಮತ್ತು ಪರಸಪ್ಪ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಈ ವಿಚಾರ ತಿಳಿದು ಯುವತಿ ಮನೆಯವರು ಬೇರೊಬ್ಬ ಹುಡುಗನ ಜೊತೆ ಲಕ್ಷ್ಮೀಯ ನಿಶ್ಚಿತಾರ್ಥ ಮಾಡಿಸಿದ್ದರು. ತನ್ನ ಪ್ರೇಯಸಿಯ ನಿಶ್ಚಿತಾರ್ಥ ಬೇರೊಬ್ಬನ ಜೊತೆ ಆಗಿರುವುದನ್ನು ತಿಳಿದ ಪರಸಪ್ಪ ಲಕ್ಷ್ಮೀ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ. ನಾವು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಬೇರೆ ಮಾಡಬೇಡಿ ಎಂದು ಕೇಳಿಕೊಂಡಿದ್ದಾನೆ.
ಇತ್ತ ಬೇರೊಬ್ಬನನ್ನು ಮದುವೆ ಆಗಲು ಒಪ್ಪಿದ ಲಕ್ಷ್ಮೀ ಜೊತೆ ಕೂಡ ಪರಸಪ್ಪ ಜಗಳವಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಯುವತಿ ಬಕೆಟ್‍ನಲ್ಲಿ ಸೀಮೆಎಣ್ಣೆ ತುಂಬಿಕೊಂಡು ಬಂದು ಪರಸಪ್ಪನ ಮೇಲೆ ಎರಚಿ, ಬೆಂಕಿ ಹಚ್ಚಿದ್ದಾಳೆ.
ಬೆಂಕಿಯ ಊರಿ ತಾಳಲಾರದೆ ಯುವಕ ಪಕ್ಕದ ಹುಲ್ಲಿನ ಬಣವೆಗೆ ಮೈ ಉಜ್ಜಿದ್ದು, ಹುಲ್ಲಿನ ಬಣವೆ ಕೂಡ ಸಂಪೂರ್ಣವಾಗಿ ಬೆಂಕಿಗೆ ಅಹುತಿಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಯುವಕನನ್ನು ರಕ್ಷಿಸಿ, ತಕ್ಷಣ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಸದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ದೇಹದ ಶೇಕಡ 30ರಷ್ಟು ಭಾಗ ಸುಟ್ಟುಹೋಗಿದ್ದು, ಯುವಕ ನೋವು ತಾಳಲಾರದೆ ರೋಧಿಸುತ್ತಿರುವುದನ್ನು ನೋಡಿ ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.