ದಾವಣಗೆರೆ: ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕ ಅಖಾಡಕ್ಕೆ ಧುಮುಕಲು ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಮೂಲಕ ಬೀಗರ ನಡುವಿನ ರಣಕಣ ರಂಗೇರುತ್ತಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಮೂರು ಬಾರಿ ಪರಾಭವಗೊಂಡಿರುವ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2004, 2009, 2014ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಲ್ಲಿಕಾರ್ಜುನ್ ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಎಂಬ ಲೆಕ್ಕಾಚಾರದೊಂದಿಗೆ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.
2009ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಪಡೆದಿದ್ದ ಮಲ್ಲಿಕಾರ್ಜುನ್, ಕೇವಲ 2 ಸಾವಿರ ಮತಗಳ ಅಂತರದಿಂದ ಸೋಲು ಒಪ್ಪಿಕೊಳ್ಳಬೇಕಾಯಿತು. 2014 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕ ಅಭ್ಯರ್ಥಿ ಹಾಕಿದ್ದರಿಂದ ಜೆಡಿಎಸ್ ನ ಮಹಿಮಾ ಜೆ ಪಟೇಲ್ 46,911 ಮತಗಳನ್ನ ಪಡೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ 5,01,287 ಮತ ಪಡೆದುಕೊಂಡು 17607 ಮತಗಳ ಅಂತರದಿಂದ ಪುನಃ ಸೋಲು ಕಾಣಬೇಕಾಯಿತು.
ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳು ಬಿಜೆಪಿಗಿಂತ ಹೆಚ್ಚಿನದ್ದಾಗಿವೆ. ಹಾಗಾಗಿ ಈ ಬಾರಿಯ ಗೆಲುವು ಸುಲಭ ಎಂಬ ಲೆಕ್ಕಾಚಾರ ಮಲ್ಲಿಕಾರ್ಜುನ್ ಆಪ್ತ ವಲಯದಲ್ಲಿದೆ. ಹಾಗಾಗಿ ಮಲ್ಲಿಕಾರ್ಜುನ್ ಸ್ಪರ್ಧೆಯನ್ನ ಅವರ ತಂದೆ ಶಾಮನೂರು ಶಿವಶಂಕರಪ್ಪ ಖಚಿತಪಡಿಸಿದ್ದಾರೆ.
ಇತ್ತ ಮೂರು ಲೋಕಸಭಾ ಚುನಾವಣೆಯಲ್ಲೂ ಗೆದ್ದು ನಗೆ ಬೀರಿದ ಬಿಜೆಪಿಯ ಜಿ.ಎಂ ಸಿದ್ದೇಶ್ವರ್ ಇದು ನನ್ನ ಕಟ್ಟಕಡೆಯ ಆಟ, ಒಮ್ಮೆ ಗೆಲ್ಲಿಸಿ ಬಿಡಿ ಎಂದು ಪ್ರಚಾರ ಶುರು ಮಾಡಿಕೊಂಡಿದ್ದಾರೆ. ಈಗಾಗಲೇ ಬಿಜೆಪಿ ಟಿಕೆಟ್ ಫೈನಲ್ ಆಗಿರೋದ್ರಿಂದ ಕಳೆದ ಒಂದು ವಾರದಿಂದ ಬಿಜೆಪಿ ಕಾರ್ಯಕರ್ತರು ಫುಲ್ ಆ್ಯಕ್ಟಿವ್ ಆಗಿ ಸಭೆ, ಸಮಾರಂಭ ನಡೆಸುತ್ತಿದ್ದಾರೆ. ಜಿ.ಎಂ.ಸಿದ್ದೇಶ್ವರ್ ಕೂಡ ಮಾವನ ಮಗನಿಗೆ ಸ್ಟ್ರೋಕ್ ಕೊಡೋದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಈಗಾಗಲೇ ಲೋಕಸಭಾ ಕ್ಷೇತ್ರದಲ್ಲಿ ಶೇ.90 ರಷ್ಟು ಹಳ್ಳಿಗಳಲ್ಲಿ ಒಂದು ರೌಂಡಿನ ಸುತ್ತಾಟ ಮುಗಿಸಿರುವ ಸಿದ್ದೇಶ್ವರ್ ಈಗ ಮತ್ತೊಂದು ಸುತ್ತಾಟಕ್ಕೆ ಸಜ್ಜಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲೇ ಜಿ.ಎಂ.ಸಿದ್ದೇಶ್ವರ್ ಗೆಲ್ಲೋದ್ರಲ್ಲಿ ಎರಡನೇ ಮಾತಿಲ್ಲ ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಜಿ.ಎಂ.ಸಿದ್ದೇಶ್ವರ್ ಮಾವ-ಅಳಿಯ. ಆದ್ರೆ, ರಾಜಕೀಯವಾಗಿ ಇಬ್ಬರೂ ಬದ್ಧ ವೈರಿಗಳು. ಮೂರು ಬಾರಿಯೂ ಮಾವನ ಮಗನನ್ನು ಮನೆಗೆ ಕಳುಹಿಸಿದ ಸಿದ್ದೇಶ್ವರ್ ಈ ಬಾರಿಗೆ ಗೆದ್ದು ಬೀಗ್ತಾರಾ, ಇಲ್ಲ ಬೀಗರಿಗೆ ಕ್ಷೇತ್ರ ಬಿಟ್ಟು ಕೊಡ್ತಾರಾ ಕಾದು ನೋಡಬೇಕಿದೆ.