– ಪತಿ ಆಯ್ತು ಈಗ ಪತ್ನಿಗೆ ಬಿಜೆಪಿ ಮಣೆ
– ಕಾಂಗ್ರೆಸ್‌ನಲ್ಲಿ ಪ್ರಭಾ ಮಲ್ಲಿಕಾರ್ಜುನ್‌ಗೆ ಟಿಕೆಟ್?
ದಾವಣಗೆರೆ: ಬಿಜೆಪಿ ಭದ್ರಕೋಟೆ ಬೆಣ್ಣೆ ನಗರಿ ದಾವಣಗೆರೆ. ಬಿಸಿಲು ಏರಿದಂತೆ ಬೆಣ್ಣೆ ನಗರಿಯಲ್ಲಿ ಎಂಪಿ ಚುನಾವಣೆ ಕಾವು ಏರುತ್ತಿದೆ. ದಾವಣಗೆರೆ ಎಂಪಿ ಕ್ಷೇತ್ರ ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆ. ಏಕೆಂದರೆ ಒಂದು ವರ್ಷ ಹೊರತುಪಡಿಸಿ ಸತತ 30 ವರ್ಷಗಳಿಂದ ಕಾಂಗ್ರೆಸ್ ಇಲ್ಲಿ ಗೆದ್ದೇ ಇಲ್ಲ. ಸತತ ನಾಲ್ಕು ಭಾರಿ ಸಂಸದ ಜಿ.ಎಂ.ಸಿದ್ದೇಶ್ವರ ಗೆದ್ದು ಬಂದಿದ್ದಾರೆ. ಬಿಜೆಪಿ ಒಳಜಗಳದಿಂದಾಗಿ ಸಿದ್ದೇಶ್ವರಗೆ ಟಿಕೆಟ್ ಕೈತಪ್ಪಬಹುದು ಎನ್ನಲಾಗಿತ್ತು. ಆದರೆ ಅವರು ಪಟ್ಟು ಹಿಡಿದು ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಈ ಭಾರಿ ಟಿಕೆಟ್‌ಗೆ ಫೈಟ್ ನಡೀತಾ ಇದೆ.
Advertisement
ಕ್ಷೇತ್ರ ಪರಿಚಯ
ದಾವಣಗೆರೆ ಲೋಕಸಭಾ ಕ್ಷೇತ್ರವು 1977 ರಲ್ಲಿ ರಚನೆಯಾಯಿತು. ಇತಿಹಾಸವನ್ನು ಅವಲೋಕಿಸಿದರೆ ಬೆಣ್ಣೆ ನಗರಿ ಮೊದಲು ಕಾಂಗ್ರೆಸ್ ಹಿಡಿತದಲ್ಲಿತ್ತು. 1999 ರಿಂದ ಬಿಜೆಪಿ ತೆಕ್ಕೆಗೆ ಬಂತು. ಈ ಲೋಕಸಭಾ ಕ್ಷೇತ್ರದಿಂದ ಕಳೆದ ಎರಡೂವರೆ ದಶಕಗಳಿಂದ ಬೇರೆ ಪಕ್ಷದವರು ಗೆದ್ದಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ 2004 ರಿಂದಲೂ ಸತತವಾಗಿ ಗೆದ್ದಿದ್ದಾರೆ. ಪ್ರಧಾನಿ ಮೋದಿ ಸಂಪುಟದಲ್ಲಿ ಒಮ್ಮೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: Lok Sabha 2024: ‘ಕೈ’ ತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯುತ್ತಾ? – ಮತ್ತೊಂದು ಗೆಲುವಿಗೆ ಬಿಜೆಪಿ ತಂತ್ರವೇನು?
Advertisement
Advertisement
8 ವಿಧಾನಸಭಾ ಕ್ಷೇತ್ರ.
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹರಿಹರ, ಜಗಳೂರು, ಚನ್ನಗಿರಿ, ಮಾಯಕೊಂಡ, ಹೊನ್ನಾಳಿ, ಹರಪನಹಳ್ಳಿ.
Advertisement
ಮತದಾರರ ಸಂಖ್ಯೆ ಎಷ್ಟು?
ದಾವಣಗೆರೆ ಕ್ಷೇತ್ರದಲ್ಲಿ 16,34,472 ಒಟ್ಟು ಮತದಾರರಿದ್ದಾರೆ. ಪುರುಷರು- 82,04,182 ಹಾಗೂ ಮಹಿಳೆಯರು- 81,0,161 ಮತದಾರರಿದ್ದಾರೆ. ಇದನ್ನೂ ಓದಿ: Lok Sabha 2024: ಕೋಟೆ ನಾಡಿಗೆ ಯಾರಾಗ್ತಾರೆ ಒಡೆಯಾ?
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸತತ 3 ಬಾರಿ ಗೆಲುವು ಸಾಧಿಸಿದ್ದ ಜಿ.ಎಂ.ಸಿದ್ದೇಶ್ವರಗೆ ಕಳೆದ ಬಾರಿ ಟಿಕೆಟ್ ನೀಡಲಾಗಿತ್ತು. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಆಭ್ಯರ್ಥಿಯಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಮಂಜಪ್ಪನಿಗೆ ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್‌ನಲ್ಲಿ ಪ್ರಾರಂಭದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಮನೆಗೆ ಬಂದಿತ್ತು. ಅವರಾಗಲಿ ಅವರ ಪುತ್ರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಿಲ್ಲಬೇಕು ಎಂದು ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಆಪ್ತನಾದ ಹೆಚ್.ಬಿ.ಮಂಜಪ್ಪಗೆ ಟಿಕೆಟ್ ಕೊಡಿಸಲಾಗಿತ್ತು. ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ, ಕಾಂಗ್ರೆಸ್‌ನ ಹೆಚ್.ಮಂಜಪ್ಪನನ್ನು ಪರಾಭವಗೊಳಿಸಿದರು. ಜಿ.ಎಂ.ಸಿದ್ದೇಶ್ವರ 6,52,996 ಮತಗಳನ್ನು ಪಡೆದರೆ, ಹೆಚ್.ಬಿ.ಮಂಜಪ್ಪ 4,83,294 ಮತಗಳನ್ನು ಪಡೆದಿದ್ದರು. ಬರೋಬ್ಬರಿ 1,69,707 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಸಿದ್ದೇಶ್ವರ ಪತ್ನಿಗೆ ಬಿಜೆಪಿ ಟಿಕೆಟ್
ಸಿದ್ದೇಶ್ವರ ಅವರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆದ್ದು ಸಂಸದರಾಗಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ನೀಡುವುದಕ್ಕೆ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಿದ್ದೇಶ್ವರ ಅವರು ಪಟ್ಟು ಬಿಡಲಿಲ್ಲ. ನನಗೆ ಟಿಕೆಟ್ ಕೊಡದಿದ್ದರೆ, ನಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದರು. ಅದರಂತೆ ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷೆಗಳು
ಕಾಂಗ್ರೆಸ್‌ನಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಬೇಕು ಎಂದು ‘ಕೈ’ ನಾಯಕರ ಒಕ್ಕೊರಲ ಒತ್ತಾಯವಾಗಿದೆ. ಟಿಕೆಟ್ ಅವರಿಗೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇವರಿಗೆ ಟಿಕೆಟ್ ಸಿಕ್ಕರೆ ಮಹಿಳೆ ವರ್ಸಸ್ ಮಹಿಳೆಯ ಫೈಟ್ ಏರ್ಪಡಲಿದೆ. ಇದನ್ನೂ ಓದಿ: Lok Sabha 2024: ಬಿಜೆಪಿ ಭದ್ರಕೋಟೆ ಒಡೆಯುತ್ತಾ ‘ಕೈ’?
ಈ ಸಲ ಏನಾದರೂ ಮಾಡಿ ಶತಾಯ ಗತಾಯ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆ ಹೊಡೆದ ಹಾಕಿ ಗೆಲುವು ಸಾಧಿಸಲು ಪಣ ತೊಟ್ಟಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್ ನಡೀತಾ ಇದೆ. ಗ್ಯಾರಂಟಿ ಗಾಳಿ ಜೊತೆಗೆ ಸ್ವಂತ ಪ್ರಭಾವ ಹೊಂದಿರುವ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅಥವಾ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಕಣಕ್ಕೆ ಇಳಿದರೇ ಪಕ್ಕಾ ಫೈಟ್ ನಿರೀಕ್ಷೆ ಮಾಡಬಹುದು. ಇತ್ತ ಇನ್ಸೈಟ್ ಐಎಎಸ್ ಕೆಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ಜಿಬಿ ವಿನಯ್ ಕುಮಾರ್ ಮಿಂಚಿನ ಸಂಚಾರ ಮಾಡುತ್ತಾ ಇದ್ದಾರೆ. ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿ ನಿರೀಕ್ಷೆ ಹುಟ್ಟಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಂಬಲ ಇರೋದ್ರಿಂದ ಟಿಕೆಟ್ ಸಿಗೋ ಸಾಧ್ಯತೆ ಇದೆ. ಜೊತೆಗೆ ಕುರುಬ ಸಮುದಾಯಕ್ಕೆ ಸೇರಿದ ವಿನಯ್ ಕುಮಾರ್, ಅಹಿಂದ ಮತಗಳ ಮೇಲೆ ಕಣ್ಣು ನೆಟ್ಟಿದ್ದು ವಿನಯ್ ಕುಮಾರ್ ಟಿಕೆಟ್ ಫಿಕ್ಸ್ ಆದರೆ ಬಿಜೆಪಿ-ಕಾಂಗ್ರೆಸ್ ನಡುವೆ ನೇರಾನೇರ ಕಾದಾಟ ನಿರೀಕ್ಷೆ ಮಾಡಬಹುದು. ಏಕಂದ್ರೆ ಈ ಹಿಂದೆ ಸತತ ಮೂರು ಸಲ ಇದೇ ಸಮುದಾಯದ ಚೆನ್ನಯ್ಯ ಒಡೆಯರ್ ಗೆದ್ದಿದ್ದು ಬಿಟ್ಟರೆ ಒಂದು ವರ್ಷ ಶಾಮನೂರು ಶಿವಶಂಕರಪ್ಪ ಎಂಪಿಯಾಗಿದ್ದರು. ಅಂದಿನಿಂದ ಇಲ್ಲಿಯವರೆಗೆ ಕಾಂಗ್ರೆಸ್ ಕ್ಷೇತ್ರ ಕಳೆದುಕೊಂಡಿದೆ. ಕಳೆದ ಬಾರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಕುರುಬ ಸಮುದಾಯದ ಹೆಚ್.ಬಿ ಮಂಜಪ್ಪ ಅವರಿಗೆ ಕೈ ಟಿಕೆಟ್ ಸಿಕ್ಕಿತ್ತಾದರೂ ಬಹಳ ಅಂತರದಲ್ಲಿ ಸೋತಿದ್ದರು. ಹೀಗಾಗಿ ಈ ಬಾರಿ ಅಹಿಂದ ಅಭ್ಯರ್ಥಿಗೆ ಅದರಲ್ಲೂ ವಿನಯ್ ಕುಮಾರ್‌ಗೆ ಟಿಕೆಟ್ ಕೊಡಬೇಕು ಎಂಬ ಕೂಗು ಇದೆ. ಆದರೆ ಇದಕ್ಕೆ ಶಾಮನೂರು ಕುಟುಂಬ ಒಕೆ ಅಂತಾರ ಇಲ್ವಾ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.
ಬಿಜೆಪಿಗೆ ಪ್ಲಸ್: ರಾಮಮಂದಿರ ಉದ್ಘಾಟನೆಯಿಂದ ಹಿಂದೂಗಳ ಮತ ಹೆಚ್ಚು ಕೃಢೀಕರಣವಾಗಿರುವುದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಇಂಗಿತ, ಲಿಂಗಾಯತ ಮತಗಳ ಪ್ರಾಬಲ್ಯ ಇದ್ದು ಕಳೆದ ಆರು ಚುನಾವಣೆಯಲ್ಲಿ ಬಿಜೆಪಿ ಮತ ನೀಡಿರುವುದು, ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿಯಿಂದ ಆದ ಅಭಿವೃದ್ಧಿ ಕಾಮಗಾರಿಗಳು, ದಾವಣಗೆರೆಯಲ್ಲಿ ಸದೃಢವಾಗಿರುವ ಬಿಜೆಪಿ ಪಕ್ಷ, ಬಲಿಷ್ಠ ಕಾರ್ಯಕರ್ತರ ಪಡೆ, 38 ಸಾವಿರ ಯುವ ಮತದಾರರ ಸೇರ್ಪಡೆಯಾಗಿದ್ದು ಮೋದಿ ಅಲೆಯಿಂದ ಬಿಜೆಪಿಗೆ ಪ್ಲಸ್ ಪಾಯಿಂಟ್
ಮೈನಸ್: ಜಿಲ್ಲೆ ಬಿಜೆಪಿಯಲ್ಲಿ ಬಣ ರಾಜಕೀಯ ಒಗ್ಗಟ್ಟಿನ ಕೊರತೆ, ಜಿಲ್ಲೆಯಲ್ಲಿ ಹರಿಹರ ಕ್ಷೇತ್ರ ಹೊರತುಪಡಿಸಿ ಏಳು ಕ್ಷೇತ್ರಗಳಲ್ಲಿ ಎಂಎಲ್‌ಎ ಸೀಟು ಸೋತಿರುವ ಬಿಜೆಪಿ, ಸಂಸದರ ಕೆಲ ನಿರ್ಧಾರಗಳಿಂದ ಕಾರ್ಯಕರ್ತರಲ್ಲಿ ಬೇಸರ, ಸಂಸದರ ವಿರುದ್ಧ ತಿರುಗಿ ನಿಂತಿರುವ ನಾಯಕರು, ಸಂಸದರ ವಿರುದ್ಧ ಸಮರ ಸಾರಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ & ಟೀಮ್, ಪದೇ ಪದೇ ಮಾತಿನ ಮೇಲೆ ನಿಂತುಕೊಳ್ಳದ ಸಂಸದರ ವಿರುದ್ಧ ಅಸಮಾಧಾನಗೊಂಡ ಜಿಲ್ಲಾ ನಾಯಕರು (ಇದೇ ಕೊನೆ ಚುನಾವಣೆ ಎಂದು ಹೇಳಿ ಈಗ ಮತ್ತೆ ಸ್ಪರ್ಧೆ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಆರೋಪ), ಗ್ರಾಮಾಂತರ ಭಾಗದಲ್ಲಿ ಅಭಿವೃದ್ಧಿಯ ಕೊರತೆ.
ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್: 5 ಗ್ಯಾರಂಟಿ ಯೋಜನೆ ಮೇಲೆ ಚುನಾವಣೆ, 8 ಕ್ಷೇತ್ರದಲ್ಲಿ 7ರಲ್ಲಿ ಕಾಂಗ್ರೆಸ್ ಶಾಸಕರ ಬಲ, ಜಿಲ್ಲೆಯಲ್ಲಿ ಸಿದ್ದರಾಮಯ್ಯ ಹೆಸರಿನ ಬಲ, ಬಿಜೆಪಿ ಹಿರಿಯ ಮುಖಂಡರು ಮಾಜಿ ಶಾಸಕರೆಲ್ಲ ಹಾಲಿ ಸಂಸದರ ವಿರುದ್ಧ ತಿರುಗಿ ಬಿದ್ದಿರುವುದು ಕಾಂಗ್ರೆಸ್ ಗೆ ವರದಾನ, ಅಹಿಂದ ಮತಗಳ ಮೇಲೆ ಕಾಂಗ್ರೆಸ್‌ಗೆ ನಂಬಿಕೆ.
ಮೈನಸ್: ಒಂದು ವರ್ಷ ಹೊರತುಪಡಿಸಿ ಸತತ ಆರು ಸಲ ಸೋತಿರುವ ಕಾಂಗ್ರೆಸ್, ಕಾಂಗ್ರೆಸ್‌ಗೆ ಕಬ್ಬಿಣ್ಣದ ಕಡಲೆಯಾಗಿರುವ ದಾವಣಗೆರೆ, ಮೋದಿ ಹಾಗೂ ರಾಮಮಂದಿರದ ಅಲೆ ಕಾಂಗ್ರೆಸ್‌ಗೆ ಮಾರಕ, ಎಂಎಲ್‌ಎ ಚುನಾವಣೆಯಂತೆ ಎಂಪಿ ಚುನಾವಣೆಯಲ್ಲಿ ಇಂಟರೆಸ್ಟ್ ತೋರಿಸದ ಜಿಲ್ಲಾ ಕಾಂಗ್ರೆಸ್ ನಾಯಕರು, ಟಿಕೆಟ್ ತಿಕ್ಕಾಟದಿಂದ ಬಣಗಳು ಉಂಟಾಗುವ ಸಾಧ್ಯತೆ, ಶಾಮನೂರು ಕುಟುಂಬ ವರ್ಸಸ್ ವಿನಯ್ ಕುಮಾರ್ ನಡುವೆ ಟಿಕೆಟ್ ಫೈಟ್ ನಿಂದ ತಿಕ್ಕಾಟದಿಂದ ಅಹಿಂದ ವರ್ಸಸ್ ಲಿಂಗಾಯತ ಮತ ವಿಭಜನೆ ಸಾಧ್ಯತೆ, ಕೇವಲ ಶಾಮನೂರು ಕುಟುಂಬಕ್ಕೆ ಮಾತ್ರ ಸೀಮಿತವಾದ ಕಾಂಗ್ರೆಸ್ ಸಂಘಟನೆ, ಲೋಕಸಭೆಗೆ ಇನ್ನು ತಯಾರಿ ಮಾಡಿಕೊಳ್ಳದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಯಕರ್ತರು, ತಮ್ಮ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಿ ಸಂಘಟನೆ ಮಾಡದ ಜಿಲ್ಲಾ ಉಸ್ತುವರಿ ಸಚಿವರು.
ಜಾತಿವಾರು ಲೆಕ್ಕಾಚಾರ
ಲಿಂಗಾಯತ- 4,60,993
ಕುರುಬ- 2,47,152
ಎಸ್‌ಟಿ- 2,14,301
ಎಸ್‌ಸಿ- 2,54,478
ಮುಸ್ಲಿಂ- 2,11,218
ಇತರೆ- 2,46,327