ದಾವಣಗೆರೆ: ಸಾಮಾನ್ಯವಾಗಿ ಎನ್‍ಎಸ್‍ಎಸ್ ಕ್ಯಾಂಪ್, ಎಸ್ ಸಿಸಿ ಕ್ಯಾಂಪ್ ಗಳನ್ನು ಗ್ರಾಮಗಳಲ್ಲಿ ನೆರವೇರಿಸಿ ಗ್ರಾಮಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಆದರೆ ದಾವಣಗೆರೆಯ ಕೆಲ ಕಾಲೇಜು ವಿದ್ಯಾರ್ಥಿಗಳು ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುವ ಕೆರೆಯ ಸ್ವಚ್ಛತೆಗೆ ಪಣ ತೊಟ್ಟಿದ್ದಾರೆ.
ದಾವಣಗೆರೆ ಕುಂದುವಾಡ ಕೆರೆ ನಗರದ ಜೀವನಾಡಿಯಾಗಿದ್ದು, ಇಡೀ ನಗರಕ್ಕೆ ನೀರುಣಿಸುವ ಕೆರೆಯಾಗಿದೆ. ಆದರೆ ಈ ಕೆರೆಯ ಸುತ್ತ ಗಿಡ-ಗಂಟಿ, ಕಸ-ಕಡ್ಡಿ ಹಾಗೂ ತ್ಯಾಜ್ಯ ನಿರ್ವಹಣೆ ಇಲ್ಲದೆ ಬಡವಾಗಿತ್ತು. ಕೇವಲ ವಾಯು ವಿಹಾರಕ್ಕೆ ಹಾಗೂ ಪ್ರಕೃತಿ ಸೌಂದರ್ಯ ಸವಿಯಲು ಬರುವ ಜನರು ಮಾತ್ರ ಇಲ್ಲಿನ ಪರಿಸರವನ್ನು ಹಾಳು ಮಾಡುವುದು ಬಿಟ್ಟರೆ, ಕೆರೆಯ ಸ್ವಚ್ಛತೆ ಬಗ್ಗೆ ಕಾಳಜಿ ತೋರಿಸುವುದೇ ಕಡಿಮೆಯಾಗಿತ್ತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್‍ಪಿ ಹನುಮಂತರಾಯ ಒಂದು ದಿನ ಅಧಿಕಾರಿಗಳೊಂದಿಗೆ ಸ್ವಚ್ಛತಾ ಅಭಿಯಾನ ನಡೆಸಿ ಶುಚಿಗೊಳಿಸಿದರು. ಆದರೆ ಒಂದೇ ದಿನಕ್ಕೆ ಸೀಮಿತವಾಗದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಾಲಿಕೆ ಈ ಮೂರು ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನಮ್ಮ ನಗರ ನಮ್ಮ ಕೆರೆ ಸ್ವಚ್ಛತಾ ಆಂದೋಲನ ಮಾಡಿದ್ದರು. ಆಗ ಕೆರೆ ಸ್ವಚ್ಛತೆ ಒಂದು ದಿನಕ್ಕೆ ಮುಗಿಯುವಂತದ್ದಲ್ಲ ಎಂದು ಭಾವಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದರು. ಅದುವೇ ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಮಟ್ಟದ ವಿಶೇಷ ಸೇವಾ ಶಿಬಿರ.
ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಸಹಯೋಗದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಮೋತಿ ವೀರಪ್ಪ ಸರ್ಕಾರಿ ಕಾಲೇಜು, ಸರ್ಕಾರಿ ಬಾಲಕರ ಕಾಲೇಜು, ಎಸ್ ಎಲ್ ಕಾಲೇಜು ಹಾಗೂ ಡಿ. ಮಂಜುನಾಥ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ಈ ನಾಲ್ಕು ಕಾಲೇಜುಗಳ ಎನ್ ಎಸ್ ಎಸ್ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ಹಾಗೂ ತಮ್ಮ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕ ವೃಂದದ ಮಾರ್ಗದರ್ಶನದಲ್ಲಿ ಕೆರೆಯ ಸುತ್ತಮುತ್ತ ಸ್ವಚ್ಛತಾ ಅಭಿಯಾನ ಮತ್ತು ಶ್ರಮದಾನ ಕೈಗೊಂಡಿದ್ದಾರೆ. ಅಲ್ಲದೆ ಪ್ರತಿ ದಿನ ಕೆರೆ ಅಂಗಳದಲ್ಲಿ ವಾಯು ವಿಹಾರಕ್ಕೆ ಮತ್ತು ಕೆರೆಯ ಸೊಬಗನ್ನು ಸವಿಯಲು ಬರುವ ಸಾರ್ವಜನಿಕರಿಗೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಜೊತೆಗೆ ಪ್ರೇರಣೆಯಾಗಿದ್ದಾರೆ.