ಮಾಜಿ ಸಿಎಂ ಸಂಬಂಧಿಕರು, ಕೆಲಸ ಕೊಡಿಸುತ್ತೇವೆ ಎಂದು 60 ಲಕ್ಷ ದೋಚಿದ ಸಹೋದರರು

Public TV
2 Min Read
collage siddu vanchane

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಸಂಬಂಧಿಕರು, ನಾವು ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ಮೂವರು ಸಹೋದರರು 10 ಯುವಕರನ್ನು ನಂಬಿಸಿ ಅವರಿಂದ 60 ಲಕ್ಷ ರೂಗಳನ್ನು ಪಡೆದುಕೊಂಡು ಪಂಗನಾಮ ಹಾಕಿದ ಘಟನೆ ದಾವಣೆಗೆರೆಯಲ್ಲಿ ನಡೆದಿದೆ.

ಈ ಮೂವರು ಸಹೋದರರನ್ನು ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮಸ್ಥರಾದ, ಬಿ.ಎಂ.ಮಹೇಶ್, ಬಿ.ಎಂ.ವಿಜಯಕುಮಾರ್ ಮತ್ತು ಬಿ.ಎಂ ನಟರಾಜ್ ಎಂದು ಗುರುತಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಸಂಬಂಧಿಕರು ಎಂದು ಹೇಳಿಕೊಂಡು ಓಡಾಡುತ್ತಿದ್ದರು ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸೆಂಟ್ರಲ್ ಸ್ಕಿಲ್ ಬೋರ್ಡ್ ಬೆಂಗಳೂರಿನಲ್ಲಿ 229 ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದನ್ನೇ ಬಂಡವಾಳ ಮಾಡಿಕೊಂಡ ಈ ಮೂವರು ಸಹೋದರರು ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ಕೆ.ವೈ.ಮಾರುತಿ, ಕುಮಾರ್, ನವೀನ್, ಗದ್ದಿಗೇಶ್, ದ್ಯಾಮಪ್ಪ, ಪ್ರವೀಣ್, ಜಿ.ಎಸ್.ಪ್ರವೀಣ್, ಮಂಜು ಗೋಣಿಗೆರೆ, ಶಿವಕುಮಾರ್, ಸಂದೀಪ್ ಕುಮಾರ್ ಎಂಬ 10 ಯುವಕರಿಗೆ ಸರ್ಕಾರಿ ನೌಕರಿ ಆಸೆ ತೋರಿಸಿ ಹಣ ಪಡೆದಿದ್ದಾರೆ.

collage dvg

ನಾವು ಕುರುಬ ಸಮುದಾಯದವರೇ, ಸಿದ್ದರಾಮಯ್ಯ ನಮ್ಮ ಸಂಬಂಧಿ. ಅವರ ಪುತ್ರ ರಾಕೇಶ್ ಸಿದ್ದರಾಮಯ್ಯನೇ ಎಲ್ಲ ಕೆಲಸವನ್ನು ಮಾಡಿಕೊಡುವುದು, ಅವರ ಮುಖಾಂತರ ಕೆಲಸ ಮಾಡಿಸಿಕೊಡುತ್ತೀವಿ ಎಂದು ನಂಬಿಸಿ ಸುಮಾರು 60 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದಾರೆ. ಹಣ ನೀಡಿದವರೆಲ್ಲರೂ ಪರಿಶಿಷ್ಠ ಜಾತಿಗೆ ಸೇರಿದವರಾಗಿದ್ದು, ಮೀಸಲಾತಿ ಅಡಿ ಕೆಲಸ ಕೊಡಿಸುತ್ತೇವೆ ಎಂದು ಹಣ ಪಡೆದಿದ್ದಾರೆ. ಆದರೆ ಇದುವರೆಗೂ ಸರ್ಕಾರಿ ಉದ್ಯೋಗವೂ ಇಲ್ಲ. ಕೊಟ್ಟ ಹಣ ವಾಪಸ್ ಕೂಡ ಇಲ್ಲ ಎಂದು ಯುವಕರ ಪಾಲಕರು ಕಣ್ಣೀರು ಹಾಕುತ್ತಿದ್ದಾರೆ.

SIDDARAMAIAH 1

ಮಕ್ಕಳಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ಇರೋಬರೋ ಜಮೀನು, ಬಂಗಾರ ಮಾರಾಟ ಮಾಡಿ, ಅವರಿವರ ಬಳಿ ಸಾಲ ಪಡೆದು ಮಹೇಶ್ ಮತ್ತು ಸಹೋದರರಿಗೆ ಹಣ ನೀಡಿದ್ದಾರೆ. ಈ ಹಣ ಕೇಳೋದಕ್ಕೆ ಎಂದು ಬೆನಕನಹಳ್ಳಿಗೆ ಹೋದರೆ ಸಹೋದರರು ಊರಿನವರನ್ನು ಸೇರಿಸಿಕೊಂಡು ದೌರ್ಜನ್ಯ ಮಾಡುತ್ತಿದ್ದಾರಂತೆ. ನಮ್ಮ ಮಕ್ಕಳಿಗೆ ಕೆಲಸ ಸಿಗಲಿ ಎಂದು ಹಣ ಕೊಟ್ಟಿದ್ದು ನಮ್ಮ ತಪ್ಪು ಈಗ ತಪ್ಪಿನ ಅರಿವಾಗಿದೆ. ನಮ್ಮಂತೆ ಬೇರೆ ಪಾಲಕರು ತಪ್ಪು ಮಾಡಿ ಸಂಕಷ್ಟಕ್ಕೆ ಸಿಲುಕಿಕೊಳ್ಳೋದು ಬೇಡ. ಈ ಮೂವರನ್ನು ಬಂಧಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *