ದಾವಣಗೆರೆ: ಐದು ವರ್ಷಗಳಿಂದ ಪ್ರೀತಿಸಿ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥವಾಗಿದ್ದ ಯುವತಿಯ ಜೊತೆ ಜಗಳವಾಡಿ, ಜಗಳ ವಿಕೋಪಕ್ಕೆ ತಿರುಗಿ ಪ್ರೀತಿಸಿದ ಯುವತಿಯೇ ಯುವಕನ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಇಟ್ಟಿದ್ದಳು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಇಂದು ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾನೆ.
ಏನಿದು ಪ್ರಕರಣ?:
ಇದೇ ತಿಂಗಳ 20 ರಂದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಡ್ಡಿನಹಳ್ಳಿಯಲ್ಲಿ ಘಟನೆ ನಡೆದಿತ್ತು. ಪರಸಪ್ಪ(35) ಗಂಭೀರವಾಗಿ ಗಾಯಗೊಂಡು ಎರಡು ದಿನಗಳ ನಂತರ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಪರಸಪ್ಪ ಅದೇ ಗ್ರಾಮದ ಯುವತಿಯನ್ನು ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದು, ಜಾತಿ ಬೇರೆಯಾದರು ಕೂಡ ತನ್ನನ್ನೇ ಮದುವೆಯಾಗುವುದಾಗಿ ಯುವತಿ ಹೇಳಿದ್ದಳು. ಆದರೆ ಬಳಿಕ ಆಕೆ ಏಕಾಏಕಿ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥವಾಗಿದ್ದಾಳೆ. ಇದರಿಂದ ಕೋಪಗೊಂಡ ಯುವಕ, ಯುವತಿಯ ಮನೆಗೆ ಹೋಗಿ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಯುವತಿಯೇ ಪ್ರೇಮಿ ಪರಸಪ್ಪನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ್ದಳು.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪರಸಪ್ಪ, ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸುಟ್ಟ ಗಾಯಗಳಿಂದ ನರಕಯಾತನೆ ಅನುಭವಿಸುತ್ತಿದ್ದನು. ಆದರೆ ಇಂದು ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾನೆ.
ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಪರಸಪ್ಪ ಇಬ್ಬರು ಸಹೋದರಿಯರನ್ನು ಹಾಗೂ ತಂದೆ ತಾಯಿಯನ್ನು ಅಗಲಿದ್ದಾನೆ. ಪರಸಪ್ಪನ ಕುಟುಂಬಸ್ಥರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸದ್ಯ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.