– ಪೋಸ್‍ಗಾಗಿ ಮಾಡಿಲ್ಲ, ಉದ್ಘಾಟನೆ ಮಾಡಿದೆ ಅಷ್ಟೇ
– ತೆಪ್ಪದಲ್ಲಿ ಬರಬೇಕು ಅಂತ ಜನರೇ ಹೇಳಿದ್ರು
– ಸ್ಪಷ್ಟನೆ ನೀಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಶಾಸಕ
ದಾವಣಗೆರೆ: ದಡ ಸೇರಿದ್ದ ತೆಪ್ಪದಲ್ಲಿ ನಿಂತು ಹುಟ್ಟು ಹಾಕಿದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು, ಸ್ಥಳೀಯರು ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ತುಂಗಾಭದ್ರಾ ನದಿಯು ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದು, ದಾವಣಗೆರೆಯ ಹೊನ್ನಾಳಿಯ ಕೆಲ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ. ಮುಳುಗಡೆಯಾದ ಪ್ರದೇಶಕ್ಕೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ಈ ವೇಳೆ ದಡಕ್ಕೆ ಸೇರಿದ್ದ ದೋಣಿಯಲ್ಲಿ ನಿಂತು ಹುಟ್ಟು ಹಾಕಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಫೋಟೋ ಚೆನ್ನಾಗಿ ಹೊಡಿರೀ, ವಿಡಿಯೋ ಮಾಡಿ. ಪಾಪ ಶಾಸಕರು ಪ್ರವಾಹದಲ್ಲಿ ತೇಲಿ ಹೋಗಿದ್ದ ಜನರನ್ನು ತೆಪ್ಪದಲ್ಲಿ ಕರೆದುಕೊಂಡು ಬಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರೇಣುಕಾಚಾರ್ಯ ಅವರು ಹುಟ್ಟು ಹಾಕುತ್ತಿರುವ ದೃಶ್ಯವನ್ನು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೇಳೆ ಸ್ಥಳೀಯರು ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದ ಮಾತುಗಳು ವಿಡಿಯೋದಲ್ಲಿ ಕೇಳಿ ಬಂದಿದೆ.
ವಿಡಿಯೋ ವೈರಲ್ ಆಗಿರುವ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ತೆಪ್ಪದಲ್ಲಿ ಬರಬೇಕು ಅಂತ ಸ್ಥಳೀಯರು ಒತ್ತಾಯ ಮಾಡಿದರು. ಉದ್ಘಾಟನೆ ಮಾಡಲು ತೆಪ್ಪದಲ್ಲಿ ನಿಂತಿದ್ದೆ. ನಾನು ಪ್ರಚಾರಕ್ಕೆ ಹಾಗೆ ಮಾಡಿಲ್ಲ. ಬೆಳಗ್ಗೆಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಸಹಾಯ ಮಾಡುತ್ತಿದ್ದೇನೆ. ಗಂಜಿ ಕೇಂದ್ರಗಳನ್ನು ತೆರೆದು, ಸಂತ್ರಸ್ತರಿಗೆ ಮೂಲ ಸೌಕರ್ಯ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.
ಹೊನ್ನಾಳಿಯ ಬಂಬೂ ಬಜಾರ್, ಬಾಲ್ ರಾಜ್ ಘಾಟ್, ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಮನೆಗಳನ್ನು ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಅಲ್ಲದೇ ತುಂಗಾಭದ್ರಾ ಹೊಳೆಯ ಪಕ್ಕದಲ್ಲೇ ಇರುವ ಬೇಲಿ ಮಲ್ಲೂರು, ಕೋಟೆ ಮಲ್ಲೂರು ಗ್ರಾಮಗಳಲ್ಲಿ ನೂರಾರು ಎಕರೆ ಬೆಳೆ ಮುಳುಗಡೆಯಾಗಿದೆ.
ಈ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಶಾಸಕರು, ಸರ್ಕಾರದಿಂದ ಆದಷ್ಟು ಬೇಗ ಪರಿಹಾರ ನೀಡಲಾಗುತ್ತದೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು. ಸ್ವಕ್ಷೇತ್ರ ಬದಾಮಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಮ್ಮೆಯೂ ಅಲ್ಲಿಗೆ ಭೇಟಿ ನೀಡಿಲ್ಲ. ದೆಹಲಿಗೆ ಹೋಗಿ ಸಭೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.