ದಾವಣಗೆರೆ: ಪ್ರವಾಹ ವೀಕ್ಷಣೆ ವೇಳೆ ಹೊನ್ನಾಳಿಯ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಜಾರಿ ಬಿದ್ದ ಪ್ರಸಂಗ ಸಾಸ್ವೇಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆಯಿತು.
ತುಂಗಭದ್ರಾ ನದಿಯ ಹರಿವು ಹೆಚ್ಚಾಗಿದ್ದರಿಂದ ಅನೇಕ ಗ್ರಾಮಗಳಿಗೆ ನೀರು ನುಗ್ಗಿದೆ. ಹೀಗಾಗಿ ಶಾಸಕರು ತಮ್ಮ ಕ್ಷೇತ್ರವಾದ ಹೊನ್ನಾಳಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಸ್ವೇಹಳ್ಳಿ ಗ್ರಾಮದಲ್ಲಿ ಪ್ರವಾಹಕ್ಕೆ ಹಾನಿಯಾದ ಪ್ರದೇಶವನ್ನು ವೀಕ್ಷಣೆ ಮಾಡುತ್ತಿದ್ದಾಗ ಅಣ್ಣಾ… ಚಾರುತ್ತೇ ಅಣ್ಣಾ… ಬೀಳುತ್ತಿರಾ ಹುಷಾರು ಎಂದು ಬೆಂಬಲಿಗರು ಶಾಸಕರಿಗೆ ತಿಳಿಸಿದರು.
Advertisement
ಅಣ್ಣಾ ನನ್ನನ್ನು ಹಿಡಿದುಕೊಳ್ಳಿ. ನಿಧಾನವಾಗಿ ದಾಟಿ ಎಂದು ರೇಣುಕಾಚಾರ್ಯ ಅವರ ಕೈಯನ್ನು ಬೆಂಬಲಿಗೊಬ್ಬರು ಹಿಡಿದರು. ಆದರೆ ಅವರಿಂದ ಕೈ ಕೊಸರಿಕೊಂಡ ಶಾಸಕರು ಹೆಜ್ಜೆ ಕೀಳುತ್ತಿದ್ದಂತೆ ಜಾರಿ ಬಿದ್ದರು. ಇದನ್ನು ನೋಡಿ ಬೆಂಬಲಿಗರು ತಕ್ಷಣವೇ ಶಾಸಕರನ್ನು ಎತ್ತಿದರು. ಅದೃಷ್ಟವಶಾತ್ ರೇಣುಕಾಚಾರ್ಯ ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ.
Advertisement
Advertisement
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈ ಭಾಗದ ಜನರು ನನ್ನನ್ನು ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಒಂದು ಬಾರಿ ಪ್ರೀತಿಯಿಂದ ಸೋಲಿಸಿದ್ದಾರೆ. ಆದರೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಕೆಲಸವಾಗಿದೆ ಎಂದು ಆರೋಪಿಸಿದರು.
Advertisement
ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ ಶಾಸಕರು, ಯಡಿಯೂರಪ್ಪ ಎಲ್ಲಿದೀಯಾಪ್ಪ ಎಂದು ಕುಮಾರಸ್ವಾಮಿ ವ್ಯಂಗ್ಯವಾಡುತ್ತಾರೆ. ಆದರೆ ಅವರು ಎಲ್ಲಿ ಇದೀರಾ ಅಂತ ಯಾರಿಗೂ ಗೊತ್ತಾಗುತ್ತಿಲ್ಲ. ಯಡಿಯೂರಪ್ಪನವರು ಪ್ರತಿಯೊಬ್ಬರ ಮನೆ, ಕೇರಿ, ಗಲ್ಲಿಗಳಲ್ಲಿ ಇರುತ್ತಾರೆ ಎಂದು ಟಾಂಗ್ ಕೊಟ್ಟರು.
ಪ್ರವಾಹ ಪೀಡಿತ ಪ್ರದೇಶಕ್ಕೆ ವಿಪಕ್ಷದ ಯಾವುದೇ ನಾಯಕರು ಭೇಟಿ ನೀಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪುನರ್ಜನ್ಮ ನೀಡಿದ ಬದಾಮಿ ಕ್ಷೇತ್ರದಲ್ಲಿ ಸಾಕಷ್ಟು ಪ್ರವಾಹವಿದೆ. ಆದರೂ ಸಹ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅಂತವರು ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ವಿಪಕ್ಷದವರು ಯಡಿಯೂರಪ್ಪ ಒಂಟಿ ಸಲಗ, ಒನ್ ಮ್ಯಾನ್ ಆರ್ಮಿ ಎಂದು ಹೀಯಾಳಿಸುತ್ತಿದ್ದಾರೆ. ಯಡಿಯೂರಪ್ಪನವರು ಒಬ್ಬರೇ ಅಲ್ಲ ಅವರ ಜೊತೆ ನಾವು ಕೂಡ ಇದ್ದೇವೆ. ಪ್ರವಾಹ ಪರಿಸ್ಥಿತಿಯನ್ನು ಎಲ್ಲರೂ ಎದುರಿಸುತ್ತಿದ್ದೇವೆ ಎಂದು ಹೇಳಿದರು.