– ದಾವಣಗೆರೆಯಲ್ಲಿ ವ್ಯಕ್ತಿ, ಕ್ಲಿನಿಕ್ ಸೀಜ್
ದಾವಣಗೆರೆ: ಇಡೀ ವಿಶ್ವವನ್ನೇ ಆವರಿಸಿರುವ ಕೊರೊನಾಗೆ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಹಗಲು-ರಾತ್ರಿ ಎನ್ನದೇ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ದಾವಣಗೆರೆಯಲ್ಲಿ ಕೊರೊನಾ ತಡೆಗಟ್ಟುವ ಔಷಧಿ ಎಂದು ಸಾರ್ವಜನಿಕರಿಗೆ ಡ್ರಾಪ್ಸ್ ನೀಡುತ್ತಿದ್ದ ವ್ಯಕ್ತಿ ಹಾಗೂ ಕ್ಲಿನಿಕನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ದಾವಣಗೆರೆ ನಗರದ ಪಿ.ಜೆ ಬಡಾವಣೆಯ ಈಶ್ವರಮ್ಮ ಶಾಲೆಯ ಆವರಣದಲ್ಲಿರುವ ಕೊಠಡಿಯೊಂದರಲ್ಲಿ ಸತ್ಯಸಾಯಿ ಹೋಮಿಯೋಪಥಿ ಕ್ಲಿನಿಕ್ ನಡೆಸಿಕೊಂಡು ಬರಲಾಗುತ್ತಿದೆ. ಇಂದು ಈ ಕ್ಲಿನಿಕ್ ನಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಔಷಧಿ ನೀಡಲಾಗುತ್ತದೆ ಎಂದು ಪೋಸ್ಟರ್ ಅಂಟಿಸಿದ್ದಾರೆ.
ಇದನ್ನು ನೋಡಿದ ಸಾರ್ವಜನಿಕರು ಕೊರೊನಾ ವೈರಸ್ ತಡೆಗೆ ಔಷಧಿ ನೀಡುತ್ತಾರೆಂದು ಕ್ಲಿನಿಕ್ ಗೆ ಮುಗಿಬಿದ್ದಾರೆ. ಇಲ್ಲಿಗೆ ಬಂದ ಜನರಿಗೆ ಒಂದು ಹನಿ ಅರ್ಸನಿಕ್ ಅಲ್ಬಾ 30 ಎಂಬ ಡ್ರಾಪ್ಸ್ ಹಾಕಲಾಗಿದೆ. ಈ ಬಗ್ಗೆ ಸಾರ್ವಜನಿಕರು ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕ್ಲಿನಿಕ್ ಗೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕೆಪಿಎಂಇ ಪರವಾನಿಗೆ ಪಡೆಯದೇ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಡ್ರಾಪ್ಸ್ ಹಾಕಿರೋದು ಬೆಳಕಿಗೆ ಬಂದಿದೆ.
ಅಲ್ಲದೇ ಈಶ್ವರಮ್ಮ ಶಾಲೆಯ ಒಂದು ಕೊಠಡಿಯಲ್ಲಿ ಶೋಭಾರಾಣಿ ಎಂಬವರು, ಸತ್ಯಸಾಯಿ ಹೋಮಿಯೋಪಥಿ ಕೇಂದ್ರವನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಶೋಭಾರಾಣಿ ಇಲ್ಲದ ವೇಳೆಯಲ್ಲಿ ಸಿಬ್ಬಂದಿ ಸಾರ್ವಜನಿಕರಿಗೆ ಕೊರೊನ ತಡೆಗಟ್ಟುವ ಡ್ರಾಪ್ಸ್ ಹಾಕಿದ್ದಾರೆ. ಡ್ರಾಪ್ಸ್ ಹಾಕುವಾಗ ಆರೋಗ್ಯದ ಪರೀಕ್ಷೆ ಮಾಡಿ ಹಾಕ ಬೇಕು. ಆದರೆ ಡಾಕ್ಟರ್ ಶೋಭಾರಾಣಿ ಅನುಪಸ್ಥಿತಿಯಲ್ಲಿ ಡ್ರಾಪ್ಸ್ ಹಾಕಿದ್ದು, ಕಾನೂನು ಬಾಹಿರವಾಗಿ ಕಾನೂನು ನೂರಾರು ಜನರನ್ನು ಒಂದು ಕಡೆ ಸೇರಿಸಿ ಡ್ರಾಪ್ಸ್ ಹಾಕಿದ್ದರಿಂದ ಇದೀಗ ಆಯುಷ್ ಅಧಿಕಾರಿಗಳು ಕ್ಲಿನಿಕ್ ಸೀಜ್ ಮಾಡಿದ್ದಾರೆ.
ಇದೀಗ ಅಧಿಕಾರಿಗಳು ಕ್ಲಿನಿಕ್ ಸೀಜ್ ಮಾಡಿದ್ದು ಹೊಮೀಯೋಪತಿ ವೈದ್ಯೆ ಶೋಭಾರಾಣಿ ಹಾಗೂ ಡ್ರಾಪ್ಸ್ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳು ಎಚ್ಚರಿಕೆ ನೀಡಿದ್ದಾರೆ.