– ವಿರೋಧಿಗಳಿಗೆ ಹೆಚ್.ಎಸ್ ಶಿವಶಂಕರ್ ಟಾಂಗ್
ದಾವಣಗೆರೆ: ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾರೂ ಕೂಡ ಸುಮ್ಮನಿರುವುದಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಂದರೆ ನಿಮ್ಮ ಬಂಡವಾಳ ಹೊರಗೆ ತೆಗೆಯುತ್ತೇನೆ ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿಯೇ ಎಚ್ಚರಿಕೆ ನೀಡಿದರು.
ದಾವಣಗೆರೆಯ ಹರಿಹರದ ವಾಸವಿ ಕಲ್ಯಾಣ ಮಂಟಪದಲ್ಲಿ ತುಮಕೂರು ಸಿದ್ದಗಂಗಾ ಶ್ರೀ ಹಾಗೂ ಪೇಜಾವರ ಶ್ರೀ ಪುಣ್ಯಸ್ಮರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಂಗವಾಗಿ ಹೆಚ್.ಶಿವಪ್ಪ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾಜಿ ಶಾಸಕ ಮಾತನಾಡಿದ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ನನ್ನನ್ನು ಮುಗಿಸಲು ಬಂದರೆ ನಾನು ನಿಮ್ಮನ್ನು ಮುಗಿಸುತ್ತೇನೆ. ನನ್ನನ್ನು ಮುಗಿಸಲು ನಿಮ್ಮಿಂದ ಸಾಧ್ಯವಿಲ್ಲ. ನಿಮ್ಮ ಬಂಡವಾಳವನ್ನು ಇಂಚಿಂಚು ಬಯಲಿಗೆಳೆಯುತ್ತೇನೆ. ಅಲ್ಪಸ್ಪಲ್ಪ ತಿಳಿದೋರು ಕುರ್ಚಿ ಮೇಲೆ ಕೂತು ಹಗುರವಾಗಿ ಮಾತನಾಡಿದ್ರೆ ಅಂತಹ ನಾಲಿಗೆಯನ್ನು ಕಟ್ ಮಾಡೋ ಶಕ್ತಿ ನನ್ನಲ್ಲಿದೆ ಎಂದು ಗುಡುಗಿದ್ರು.
ಹುಲಿ ಸುಮ್ಮನಿದೆ ಎಂದ ಮಾತ್ರಕ್ಕೆ ಅದು ಬಲಹೀನವಾಗಿದೆ ಎಂದರ್ಥವಲ್ಲ. ಮುಂದೆ ಬೇಟೆಗೆ ಸಿದ್ಧವಾಗಿದೆ ಎಂಬರ್ಥ ಎಂದು ಗುಡುಗಿದ್ದಾರೆ. ನಾನು ಯಾವುದೋ ಒಂದು ಸಮಾಜದ ನಾಯಕನಲ್ಲ. ಕಳೆದ ಚುನಾವಣೆಯಲ್ಲಿ ಸೋತಿರಬಹುದು. ಆದರೆ ರಾಜಕೀಯ ಕಾರಣದಿಂದ ಈ ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ.
ಕಳೆದ ಜನವರಿ ಪಂಚಮಸಾಲಿ ಪೀಠದಲ್ಲಿ ನಡೆದ ಹರ ಜಾತ್ರೆಗೆ ಪಂಚಮಸಾಲಿ ಸಮಾಜದವರೇ ಆದ ಹೆಚ್.ಎಸ್ ಶಿವಶಂಕರ್ ಅವರನ್ನು ಆಹ್ವಾನ ಮಾಡಿರಲಿಲ್ಲ. ಇದರಿಂದ ಪಂಚಮಸಾಲಿ ಪೀಠದ ಸ್ವಾಮೀಜಿ ವಚನಾನಂದ ಶ್ರೀಗಳಿಗೆ ಟಾಂಗ್ ನೀಡಿರಬಹುದು ಎನ್ನಲಾಗುತ್ತಿದೆ.